ಸಿಬಿಎಸ್‌ಇ 12ನೇ ತರಗತಿ ಗಣಿತ ಪರೀಕ್ಷೆ ಸುಲಭ, ಆದರೆ ಸಮಯ ಸಾಲಲಿಲ್ಲ : ವಿದ್ಯಾರ್ಥಿಗಳ ಅಳಲು

ಹೊಸದಿಲ್ಲಿ, ಮಾ.20: ಸಿಬಿಎಸ್‌ಇ 12ನೇ ತರಗತಿಯ ಗಣಿತ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರ ಸುದೀರ್ಘವಾಗಿದ್ದ ಕಾರಣ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಆದರೆ ಕಳೆದ ವರ್ಷದ ಪ್ರಶ್ನೆಪತ್ರಿಕೆಯಂತೆ ಈ ಬಾರಿಯ ಪ್ರಶ್ನೆಪತ್ರಿಕೆ ಕಬ್ಬಿಣದ ಕಡಲೆಯಾಗಿರಲಿಲ್ಲ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಗಣಿತ ಪ್ರಶ್ನೆಪತ್ರಿಕೆ ಕಠಿಣವಾಗಿದ್ದ ಕಾರಣ ತಮಗೆ ‘ಗ್ರೇಸ್ ಮಾರ್ಕ್’ ನೀಡಬೇಕೆಂದು ವಿದ್ಯಾರ್ಥಿಗಳು ಪರೀಕ್ಷಾ ಮಂಡಳಿಗೆ ಮನವಿ ಸಲ್ಲಿಸಿದ್ದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. ಆದರೆ ಇದಕ್ಕೆ ಸುಧೀರ್ಘ ಉತ್ತರದ ಅಗತ್ಯವಿದ್ದ ಕಾರಣ ಸಮಯ ಸಾಲಲಿಲ್ಲ. ನಾನು 85 ಅಂಕದ ಪ್ರಶ್ನೆಗಳಿಗಷ್ಟೇ ಉತ್ತರಿಸಲು ಸಾಧ್ಯವಾಯಿತು ಎಂದು ಭಾರತೀಯ ವಿದ್ಯಾಭವನದ ವಿದ್ಯಾರ್ಥಿ ಆದಿತ್ಯ ಎಂಬಾತ ಹೇಳಿದ್ದಾನೆ. ಇನ್ನೂ ಒಂದು ಗಂಟೆ ಅವಧಿ ನೀಡಿದ್ದರೆ ಎಲ್ಲಾ ಪ್ರಶ್ನೆಗಳನ್ನೂ ಉತ್ತರಿಸಬಹುದಿತ್ತು ಎಂದು ಮಂದಿರ್ ಮಾರ್ಗದಲ್ಲಿರುವ ಸರಕಾರಿ ಶಾಲೆಯೊಂದರ ವಿದ್ಯಾರ್ಥಿ ಹೇಳಿದ್ದಾನೆ.
ಈ ಬಾರಿಯ ಇಂಗ್ಲಿಷ್ ಪರೀಕ್ಷೆ ಸಾಧಾರಣ ಸುಲಭವಾಗಿತ್ತು ಎಂದೂ ವಿದ್ಯಾರ್ಥಿಗಳು ತಿಳಿಸಿದ್ದಾರೆ.