ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಸೆರೆ

ಮಂಗಳೂರು, ಮಾ. 20: ನೆರೆಮನೆಯ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿ ತಲೆಮರೆಸಿಕೊಂಡಿದ್ದ ಕುಂಜತ್ತಬೈಲ್‌ನ ಆನಂದ (24) ಎಂಬಾತನನ್ನು ಕಾವೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆರೋಪಿ ಆನಂದನು ಈ ಹಿಂದೆ ಯುವತಿಯನ್ನು ಉಡುಪಿಯ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯನ್ನು ತಾನು ಮದುವೆಯಾಗುವುದಾಗಿ ಸಂಬಂಧಿಕರ ಬಳಿ ಹೇಳಿಕೊಂಡನಲ್ಲದೆ, ಅಲ್ಲಿ ಉಳಿದುಕೊಂಡಿದ್ದ ವೇಳೆ ಯುವತಿಯ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ.
ಬಳಿಕ ಆತ ಯುವತಿಗೆ ವಂಚಿಸಿ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ರವಿವಾರ ದೂರು ದಾಖಲಾಗಿತ್ತು. ಕುಂಜತ್ತಬೈಲ್‌ನಲ್ಲಿದ್ದ ತನ್ನ ಮನೆಯ ಸಾಮಾನುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ್ದ ಆತ ಸೋಮವಾರ ಬ್ಯಾಗ್ ಸಮೇತ ಉಳಿದ ಸಾಮಾನು ಕೊಂಡೊಯ್ಯಲು ಬಂದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ಆನಂದನನ್ನು ಬಂಧಿಸಿದ್ದಾರೆ.
ಆನಂದನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





