ಉತ್ತರಕನ್ನಡದ ಯುವತಿ ನಾಪತ್ತೆ ಪ್ರಕರಣ: ಆರೋಪಿ ಸುನೀತಾ ಬಿಚ್ಚಕಲೆ ಹಳಿಯಾಳ ಪೊಲೀಸ್ ವಶಕ್ಕೆ

ಉಳ್ಳಾಲ, ಮಾ.20: ಉತ್ತರ ಕನ್ನಡದ ರಾಯಪಟ್ಟಣ, ಹಳಿಯಾಳ ಮೂಲದ ಯುವತಿಯೋರ್ವಳನ್ನು ಮಂಗಳೂರಿನ ಉಳ್ಳಾಲದ ಕಂಪನಿಗೆ ಕೆಲಸಕ್ಕೆ ಸೇರಿಸುತ್ತೇನೆಂದು ಕರೆದುಕೊಂಡು ಹೋದ ಸುನೀತಾ ಬಿಚ್ಚಕಲೆ ಬಳಿಕ ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇದೀಗ ನಾಪತ್ತೆಯಾಗಿದ್ದ ಯುವತಿಯೊಂದಿಗೆ ಹಳಿಯಾಳ ಪೊಲೀಸ್ ಠಾಣೆಗೆ ಸೋಮವಾರದಂದು ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ರಾಯಪಟ್ಟಣ, ಹಳಿಯಾಳ ತಾಲೂಕಿನ ದೋಂಡಿಬಾಯಿ ಚಿಮನು ಬಾಜಾರಿ(20)ಎಂಬ ಯುವತಿಯನ್ನು ಕಳೆದ 8ತಿಂಗಳ ಹಿಂದೆ ಅಲಕೇರಾ ಯಲ್ಲಾಪುರದ ಸುನೀತಾ ದುಳು ಬಿಚ್ಚಕಲೆ(24)ಎಂಬ ಮಹಿಳೆಯೋರ್ವಳು ಮಂಗಳೂರಿನ ಉಳ್ಳಾಲದ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿಸಿದ್ದಳು.
ಆದರೆ ಕಳೆದ ಒಂದುವಾರದಿಂದ ಇಬ್ಬರೂ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಿಂದ ಗಾಬರಿಗೊಂಡಿದ್ದ ದೋಂಡಿಬಾಯಿ ಪೋಷಕರು ಮತ್ತು ಊರವರು ಹಳಿಯಾಳದಲ್ಲೂ ದೂರು ನೀಡಿದ್ದು ನಂತರ ಉಳ್ಳಾಲ ಠಾಣೆಯಲ್ಲಿ ಮಾರ್ಚ್ 17ರಂದು ದೂರನ್ನು ನೀಡಿದ್ದರು. ಪೊಲೀಸರು ಈ ಬಗ್ಗೆ ದೂರು ದಾಖಲಿಸಿ ತನಿಖೆ ನಡೆಸಿದ್ದರು.
ಸೋಮವಾರದಂದು ದೋಂಡಿಬಾಯಿಯ ಸಮೇತ ಹಳಿಯಾಳ ಪೊಲೀಸ್ ಠಾಣೆಗೆ ಶರಣಾದ ಸುನೀತ ಬಿಚ್ಚಕಲೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿ ಸುನೀತಾ ದೋಂಡಿಬಾಯಿಯನ್ನು ಮನೆಯವರು ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಲು ಹೊರಟಿದ್ದು ಆದುದರಿಂದ ಅವಳನ್ನು ನನ್ನೊಟ್ಟಿಗೆ ಇರಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದ್ದು, ಆದರೆ ಈ ಆರೋಪವನ್ನು ಯುವತಿಯ ಪೋಷಕರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಸುನೀತಾ ಬಿಚ್ಚಕಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಹೆಚ್ಚಿನ ವಿಚಾರಣೆಗಾಗಿ ಹಳಿಯಾಳ ಪೊಲೀಸರು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ.







