ರೇಖಾ ನಾಗರಾಜ್ ಮೇಯರ್ ಅಕಾಲಿಕ ಮಳೆಗೆ ಕುಸಿದ ಗುಡಿಸಲು: ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ

ಮೂಡಿಗೆರೆ, ಮಾ.20: ವಿಲ್ಲುಪುರಂ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಣಕಲ್ ಪಶು ಆಸ್ಪತ್ರೆ ಸಮೀಪ ವಾಸವಿದ್ದ ಬಡ ಕೂಲಿ ಕಾರ್ಮಿಕ ಲಕ್ಷ್ಮಣ್ ಎಂಬವರ ಗುಡಿಸಲು ಎರಡು ದಿನಗಳ ಹಿಂದೆ ಸುರಿದ ಮಳೆಗೆ ಕುಸಿದು ಬಿದ್ದಿದೆ. ಗುಡಿಸಲು ಕುಸಿಯುವ ಸಮಯದಲ್ಲಿ ಒಳಗಿದ್ದ ಲಕ್ಷ್ಮಣ್ ಅವರ ಪುತ್ರಿ ಶಾಂಭವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಬಾಲಕಿಗೆ ಬಣಕಲ್ ಪ್ರಾಥಾಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಲಕ್ಷ್ಮಣ ತನ್ನ ಮಗಳು ಶಾಂಭವಿಯೊಂದಿಗೆ ಹಲವು ವರ್ಷಗಳಿಂದ ಬಣಕಲ್ ಪಶು ಆಸ್ಪತ್ರೆಯ ಸಮೀಪ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾರೆ ಎರಡು ದಿನಗಳ ಹಿಂದೆ ದಿಢೀರ್ ಸುರಿದ ಮಳೆಯಿಂದಾಗಿ ಗುಡಿಸಲು ಕುಸಿದು ಬಿದ್ದಿದ್ದರಿಂದ ಬಡ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ.
ಸ್ವಂತ ಮನೆ ಕಟ್ಟಿಕೊಳ್ಳಲು ಬಣಕಲ್ ಗ್ರಾಪಂಗೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಲಕ್ಷ್ಮಣನ ಕುಟುಂಬಕ್ಕೆ ನಿವೇಶನದ ಸೌಲಭ್ಯ ಬೇಕಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಅಧ್ಯಕ್ಷ ಕೆ.ಸಿ. ರತನ್ ಗ್ರಾಪಂ ವತಿಯಿಂದ ನಿವೇಶನ ನೀಡುವಂತೆ ಬಣಕಲ್ ಗ್ರಾಪಂಗೆ ಸೂಚಿಸಿದ್ದರು. ಆದರೆ, ಗ್ರಾಮ ಪಂಚಾಯತ್‌ನ ಅಧಿಕಾರಿಗಳ ನಿರ್ಲಕ್ಷ ಫಲವಾಗಿ ಈತನಕ ನಿವೇಶನ ಮಂಜೂರಾಗದೇ ಇರುವ ಲಕ್ಷ್ಮಣ್ ಅವರ ಕುಟುಂಬ ಸರಕಾರದ ಹಳೇ ರಸ್ತೆಯ ಗುಡಿಸಲಿನಲ್ಲಿ ವಾಸವಾಗಿದೆ.
ಬಾಲಕಿ ಶಾಂಭವಿ 6ನೆ ತರಗತಿ ಓದುತ್ತಿದ್ದಾಳೆ. ಈಗ ಪರೀಕ್ಷೆ ಸಮಯವಾಗಿದ್ದರಿಂದ ಗುಡಿಸಲು ಕುಸಿದಿರುವುದು ಬಾಲಿಕಿಯ ಓದಿಗೆ ತೊಂದರೆ ಉಂಟಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಲಕ್ಷ್ಮಣ ಕುಟುಂಬ ವಸತಿ ನಿರೀಕ್ಷೆಯಲ್ಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಇತ್ತ ಗಮನ ಹರಿಸಬೇಕಿದೆ.
ಬಣಕಲ್‌ನಲ್ಲಿ ಕೂಲಿ ಕಾರ್ಮಿಕ ಲಕ್ಷ್ಮಣ್ ಕುಟುಂಬವು ಮನೆ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಲಕ್ಷ್ಮಣ್‌ಗೆ ವಸತಿ ಅಥವಾ ನಿವೇಶನ ನೀಡುವ ಸಲುವಾಗಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಿವೇಶನ ಕಲ್ಪಿಸುವಂತೆ ಮೇಲಧಿಕಾರಿಗಳಿಗೆ ಶಿಪಾರಸು ಮಾಡಲಾಗುವುದು. ಮನೆ ಕುಸಿದಿರುವುದರಿಂದ ಸದ್ಯಕ್ಕೆ ನಿಲ್ಲಲು ವ್ಯವಸ್ಥೆ ಮಾಡಲಾಗುವುದು.
ಡಿ.ನಾಗೇಶ್, ಮೂಡಿಗೆರೆ ತಹಶೀಲ್ದಾರ್.







