ವೀರಾಜಪೇಟೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮ್ಮೇಳನ ಸಮಾರೋಪ

ವೀರಾಜಪೇಟೆ. ಮಾ.20: ಧಾರ್ಮಿಕ ಸಹಿಷ್ಣುತೆ ಮತ್ತು ಕೋಮುಸೌಹಾರ್ದ ನಮ್ಮ ದೇಶದ ಪಾರಂಪರಿಕ ಸಂಸ್ಕೃತಿಯಾಗಿದೆ. ಧಾರ್ಮಿಕ ಸಹಬಾಳ್ವೆಗೆ ಧಕ್ಕೆ ಉಂಟು ಮಾಡುವ ಶಕ್ತಿಗಳನ್ನು ಐಕ್ಯದಿಂದ ಎದುರಿಸಬೇಕಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಅಧ್ಯಕ್ಷ ಹಾಗೂ ಆಧ್ಯಾತ್ಮಿಕ ನಾಯಕ ಪಾಣಕ್ಕಾಡ್ ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಅಭಿಪ್ರಾಯಪಟ್ಟರು. ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯ ಬ್ರೈಟ್ ಕ್ಯಾಂಪಸ್ ಸಮೀಪ ಹುದೈಬಿಯ್ಯ ನಗರದಲ್ಲಿ ನಡೆದ ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಇಡೀ ಮಾನವ ಜನಾಂಗದ ಏಳಿಗೆಯನ್ನು ಮುಂದಿರಿಸಿ ಕಾರ್ಯಪ್ರವೃತರಾಗಬೇಕು. ಜಾತ್ಯತೀತ ನಿಲುವಿನಲ್ಲಿ ನೆಲೆನಿಂತು ಸೌಹಾರ್ದ ಕಾಪಾಡಬೇಕು. ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶ ಸಮಾಜ ಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಸಮಸ್ತ ಕೇರಳ ಇಸ್ಲಾಂ ಧಾರ್ಮಿಕ ಶಿಕ್ಷಣ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಟಿ.ಅಬ್ದುಲ್ಲಾ ಉಸ್ತಾದ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಒಳಿತಿನಿಂದ ಕೂಡಿದ ಮತ್ತು ಧಾರ್ಮಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡ ಸಮಾಜದ ನಿರ್ಮಾಣ ಎಸ್ಕೆಎಸ್ಸೆಸ್ಸೆಫ್‌ನ ಗುರಿಯಾಗಿದೆ. ಪ್ರವಾದಿ ಮುಹಮ್ಮದ್(ಸ)ಅವರ ಜೀವನ ಯುವಜನತೆಗೆ ಮಾದರಿಯಾಗಬೇಕು. ಕುರ್‌ಆನಿನ ಸಂದೇಶಗಳು ಆಧುನಿಕ ಮನುಷ್ಯನ ಜೀವನಕ್ಕೆ ದಾರಿದೀಪವಾಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಂ.ಇಬ್ರಾಹೀಂ, ಕರ್ನಾಟಕ ರಾಜ್ಯ ರೇಶ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಸಿದ್ದಾಪುರ ಮುಸ್ಲಿಂ ಜಮಾಅತ್‌ನ ಕೆ.ಉಸ್ಮಾನ್ ಹಾಜಿ, ಸುಂಟಿಕೊಪ್ಪದ ಎ.ಸಿ.ಉಸ್ಮಾನ್ ಫೈಝಿ, ಎಫ್.ಎ.ಮುಹಮ್ಮದ್ ಹಾಜಿ ಮಡಿಕೇರಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಸ್ಸಲಾಂ, ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಲಹಾ ಸಮಿತಿಯ ಸದಸ್ಯ ಶೌಕತ್‌ಅಲಿ, ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎ.ಬಿ.ಉಮ್ಮರ್, ವಿರಾಜಪೇಟೆ ಮಸ್ಜಿದ್‌ಎಆಝಮ್ ಖತೀಬ್ ಮೌಲನಾ ಸಿರಾಜುದ್ದೀನ್, ಪೇರಾವೂರ್‌ನ ಖತೀಬ್ ಮೂಸ ಮುಸ್ಲಿಯಾರ್, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಹಂಝ, ಮಸ್ಜಿದ್-ಎ-ಆಝಮ್ ಅಧ್ಯಕ್ಷ ನಿಸಾರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಎಸ್ಕೆಎಸ್ಸೆಸ್ಸೆಫ್‌ನ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಲೀಖ್ ದಾರಿಮಿ ಸ್ವಾಗತಿಸಿದರು. ಶಫೀಕ್ ಕಲ್ಲುಬಾಣೆ ವಂದಿಸಿದರು.
ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಗೌರವಾಧ್ಯಕ್ಷ ಪಿ.ಕೆ.ಮುಹಮ್ಮದ್ ಹಾಜಿರವರ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಿತು. ಗೋಣಿಕೊಪ್ಪದ ಎಂ.ಅಬ್ದುರಹ್ಮಾನ್ ಮುಸ್ಲಿಯಾರ್ ಪ್ರಥಮ ಅಧಿವೇಶನವನ್ನು ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ಇತಿಹಾಸ ಮತ್ತು ಪ್ರಯಾಣ ಎಂಬ ವಿಷಯದಲ್ಲಿ ಸತ್ತಾರ್ ಪಂದಲ್ಲೂರ್, ಇತ್ತಿಬಾವುರ್ರಸಲೂಲ್ ಎಂಬ ವಿಷಯದಲ್ಲಿ ಆಸಿಫ್ ದಾರಿಮಿ ಪುಳಿಕ್ಕಲ್ ಕುರಿತು ಮಾತನಾಡಿದರು.







