ಮತಯಂತ್ರದಲ್ಲಿ ಹಸ್ತಕ್ಷೇಪ: ಗೋವಾದಲ್ಲೂ ಪ್ರತಿಧ್ವನಿ
ಪಣಜಿ, ಮಾ.20: ಇತ್ತೀಚೆಗೆ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರಗಳಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂದು ಗೋವಾ ಸುರಕ್ಷಾ ಮಂಚ್(ಜಿಎಸ್‌ಎಂ) ಆರೋಪಿಸಿದೆ. ನಮ್ಮ ಅಭ್ಯರ್ಥಿಗೆ ಕನಿಷ್ಠ ಪ್ರಮಾಣದಲ್ಲಿ ಮತಗಳು ದೊರಕಿದ್ದು ಇದು ಅನಿರೀಕ್ಷಿತವಾಗಿದೆ ಎಂದು ಜಿಎಸ್‌ಎಂ ಅಧ್ಯಕ್ಷ ಆನಂದ್ ಶಿರೋಡ್ಕರ್ ಪಿಟಿಐಗೆ ತಿಳಿಸಿದ್ದಾರೆ. ಎಂಜಿಪಿ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಿಎಸ್‌ಎಂ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಒಟ್ಟು ಚಲಾವಣೆಯಾದ ಮತಗಳಲ್ಲಿ ಕೇವಲ ಶೇ.1.2ರಷ್ಟು ಮತಗಳನ್ನು ಪಡೆದಿತ್ತು. ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮತಯಂತ್ರಗಳಲ್ಲಿ ಹಸ್ತಕ್ಷೇಪ ನಡೆದಿರುವ ಬಗ್ಗೆ ಶಂಕೆಯಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಯೋಜಿಸಲಾಗಿದೆ ಎಂದ ಅವರು, ಹಲವಾರು ತಂತ್ರಜ್ಞರನ್ನು ಸಂಪರ್ಕಿಸಿದ್ದು ಮತಯಂತ್ರಗಳಲ್ಲಿ ಹಸ್ತಕ್ಷೇಪದ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದವರು ಹೇಳಿರುವುದಾಗಿ ಶಿರೋಡ್ಕರ್ ತಿಳಿಸಿದ್ದಾರೆ.
Next Story