ರಾಷ್ಟ್ರ ಮಟ್ಟದ ರಾಜಕೀಯದತ್ತ ಮುಸ್ಲಿಂ ಲೀಗ್ ಚಿತ್ತ

ಹೊಸದಿಲ್ಲಿ, ಮಾ.21: ಸ್ಥಾಪನೆಯಾಗಿ ಸುಮಾರು 60 ವರ್ಷಗಳು ಕಳೆದ ಬಳಿಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದೀಗ ರಾಷ್ಟ್ರ ರಾಜಕಾರಣದತ್ತ ತನ್ನ ಚಿತ್ತ ಹರಿಸಿದೆ. ಕೆಲ ರಾಜ್ಯಗಳಲ್ಲಿನ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ಪರ್ಧಿಸಿದ ಹೊರತಾಗಿ ಲೀಗ್ 1960ರಿಂದ ತನ್ನ ಭದ್ರಕೋಟೆಯಾದ ಕೇರಳ ಬಿಟ್ಟು ಆಚೆ ಹೋಗುವ ಪ್ರಯತ್ನವನ್ನೇ ಮಾಡಿಲ್ಲ. ಆದರೆ ಉತ್ತರ ಪ್ರದೇಶ ವಿಧಾಸನಭಾ ಚುನಾವಣಾ ಫಲಿತಾಂಶದ ನಂತರ ಅದರ ನಾಯಕತ್ವ ರಾಷ್ಟ್ರ ರಾಜಕಾರಣದತ್ತ ಒಲವು ತೋರಿಸಿದೆ.
ಮುಸ್ಲಿಂ ರಾಜಕೀಯ ಸಂಘಟನೆಗಳು ಸಮುದಾಯದ ಮತದಾರರ ವಿಶ್ವಾಸ ಸಂಪಾದಿಸುವಲ್ಲಿ ವಿಫಲವಾಗಿವೆ ಎಂದು ಬಲವಾಗಿ ನಂಬಿರುವ ಲೀಗ್ ನಾಯಕರು ಕಳೆದ ಗುರುವಾರ ನಡೆದ ಪಕ್ಷದ ರಾಷ್ಟ್ರೀಯ ಸೆಕ್ರಟೇರಿಯಟ್ ಸಭೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಳ್ಳುವ ಬಗೆಗಿನ ನಿರ್ಧಾರವನ್ನು ಘೋಷಿಸಿದ್ದಾರೆ.
ರಾಜ್ಯ ಮಟ್ಟದ ಹಾಗೂ ಪ್ರಾದೇಶಿಕ ಮಟ್ಟದ ಸಮಿತಿಗಳನ್ನು ರಚಿಸಲು ಮುಂದಾಗಿರುವ ಪಕ್ಷ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಸ್ಪರ್ಧಿಸಲು ನಿರ್ಧರಿಸಿದೆ. ಜೂನ್ ತಿಂಗಳಲ್ಲಿ ಗೋವಾದಲ್ಲಿ ತನ್ನ ಸದಸ್ಯರಿಗೆ ತರಬೇತಿ ಶಿಬಿರವೊಂದನ್ನೂ ಪಕ್ಷ ನಡೆಸಲಿದ್ದು ಮಾಜಿ ಅಧಿಕಾರಿಗಳು ಹಾಗೂ ವೃತ್ತಿಪರರೂ ಸೇರಿದಂತೆ ಸಮುದಾಯದ 50 ಮಂದಿ ಗಣ್ಯರು ಪಕ್ಷದ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
‘‘ಕೇವಲ ಬಾಯ್ಮತು ಹಾಗೂ ಆಕ್ರಮಣಕಾರಿ ಹೇಳಿಕೆಗಳನ್ನು ವಿರೋಧಿಗಳನ್ನು ಗುರಿಯಾಗಿಸಿ ನೀಡುವುದರಲ್ಲಿ ಪಕ್ಷ ನಂಬಿಕೆಯಿರಿಸಿಲ್ಲ,’’ ಎಂದು ಹೇಳುತ್ತಾರೆ ಸಂಸದ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಇ ಟಿ ಮೊಹಮ್ಮದ್ ಬಶೀರ್. ‘‘ಮುಸ್ಲಿಮರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಅವರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯೇ ನಮ್ಮ ಗುರಿ. ಕೇರಳದಲ್ಲಿ ನಮ್ಮ ಬೆಳವಣಿಗೆಗೆ ಅನುಕೂಲಕರವಾದ ಮಾದರಿಯನ್ನೇ ನಾವು ಅನುಸರಿಸುತ್ತೇವೆ,’’ ಎಂದು ಅವರು ವಿವರಿಸುತ್ತಾರೆ.
ಕೇರಳದಲ್ಲಿ ಲೀಗ್ ಇತಿಹಾಸ: ಕೇರಳ ರಾಜ್ಯ ರಚನೆಯಾದ ನಂತರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಒಟ್ಟು 22 ಮೈತ್ರಿಕೂಟ ಸರಕಾರಗಳಲ್ಲಿ 13ರಲ್ಲಿ ಲೀಗ್ ಭಾಗಿಯಾಗಿತ್ತು. ಪಕ್ಷದ ಅತ್ಯಂತ ಹಿರಿಯ ನಾಯಕ ಮುಹಮ್ಮದ್ ಕೋಯಾ ಮುಖ್ಯಮಂತ್ರಿಯೂ ಆಗಿದ್ದರಲ್ಲದೆ ಪಕ್ಷದ ಹಲವರು ಸಚಿವ ಹುದ್ದೆಗಳನ್ನೂ ಪಡೆದಿದ್ದಾರೆ.
ಸದ್ಯ ಕೇರಳದಲ್ಲಿ ಲೀಗ್ ಗೆ 18 ಶಾಸಕರುಗಳ ಬಲವಿದ್ದು ಒಬ್ಬ ರಾಜ್ಯಸಭಾ ಸದಸ್ಯರೂ ಇದ್ದಾರೆ. ಫೆಬ್ರವರಿಯಲ್ಲಿ ನಿಧನರಾದ ಇ ಅಹಮದ್ ಅವರು ಮಲಪ್ಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
1948ರಲ್ಲಿ ಸ್ಥಾಪನೆಯಾದಂದಿನಿಂದ ಲೀಗ್ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ವಿಜಯ ಸಾಧಿಸಿದೆ. 70ರ ದಶಕದಲ್ಲಿ ಅದು ಪಶ್ಚಿಮ ಬಂಗಾಳದಲ್ಲಿ ಏಳು ವಿಧಾನಸಭಾ ಸ್ಥಾನಗಳನ್ನೂ ಪಡೆದಿತ್ತು.
ತನ್ನ ಯೋಜನೆಯಂತೆ ಮುಸ್ಲಿಮ್ ಲೀಗ್ ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿದ್ದೇ ಆದಲ್ಲಿ ಅದು ಹೈದರಾಬಾದ್ ಮೂಲದ ಅಸಾಸುದ್ದೀನ್ ಉವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದ್-ಉಲ್- ಮುಸ್ಲಿಮೀನ್ ಗೆ ಪ್ರಮುಖ ಸವಾಲೊಡ್ಡುವ ಸಾಧ್ಯತೆಯಿದೆ.







