ಶೀಘ್ರವೇ ಆಸ್ತಿ ತೆರಿಗೆ, ನೀರಿನ ಶುಲ್ಕ ಆನ್‌ಲೈನ್ ಪಾವತಿ: ಮೇಯರ್

ಮಂಗಳೂರು, ಮಾ.21: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ನಾಲ್ಕು ತಿಂಗಳೊಳಗೆ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ಅವಧಿಯಲ್ಲಿ ಕೈಗೊಳ್ಳಲಾಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ನಗರದ ಸುಂದರೀಕರಣದ ಜತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಕಂಪ್ಯೂಟರೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು, ಈಗಾಗಲೇ ನಗರದಲ್ಲಿ ಕಾಂಕ್ರೀಟೀಕರಣ ನಡೆದಿರುವಲ್ಲಿ ಫುಟ್‌ಪಾತ್ ಹಾಗೂ ಚರಂಡಿ ನಿರ್ಮಾಣವನ್ನು ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳುತ್ತಿರುವುದಾಗಿ ಹೇಳಿದರು.
ಐದು ಇ- ಟಾಯ್ಲೆಟ್‌ಗಳು 15 ದಿನಗಳಲ್ಲಿ ಉದ್ಘಾಟನೆ: ನಗರದ ಕದ್ರಿ ಪಾರ್ಕ್, ಲಾಲ್‌ಬಾಗ್ ಬಳಿ ತಲಾ ಎರಡು ಹಾಗೂ ಹಂಪನ್‌ಕಟ್ಟೆ ಸಿಗ್ನಲ್ ಬಳಿ ಒಂದು ಸೇರಿದಂತೆ ಒಟ್ಟು ಐದು ಇ- ಟಾಯ್ಲೆಟ್‌ಗಳು ಮುಂದಿನ 15 ದಿನಗಳೊಳಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿವೆ ಎಂದು ಮೇಯರ್ ಕವಿತಾ ಸನಿಲ್ ಈ ಸಂದರ್ಭ ತಿಳಿಸಿದರು.
ಕುಡಿಯುವ ನೀರಿಗೆ ಸಮಸ್ಯೆ ಆಗದು: ಭರವಸೆ
ನಗರದಲ್ಲಿ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಪ್ರಸಕ್ತ ಸಾಲಿನಲ್ಲಿ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಕೂಡಾ ಕುಡಿಯುವ ನೀರನ್ನು ಹಿತಮಿತವಾಗಿ ಬಳಸುವ ಮೂಲಕ ಮನಪಾ ಆಡಳಿತದ ಜತೆ ಸಹಕರಿಸಬೇಕು ಎಂದು ಮೇಯರ್ ಕವಿತಾ ಸನಿಲ್ ಮತ್ತೊಮ್ಮೆ ನಗರದ ಜನತೆಯನ್ನು ಮನವಿ ಮಾಡಿದರು.
ತುಂಬೆಯಲ್ಲಿ 7 ಮೀಟರ್‌ವರೆಗೆ ನೀರು ನಿಲ್ಲಿಸಲು ಕ್ರಮ
ತುಂಬೆಯ ನೂತನ ಅಣೆಕಟ್ಟಿನಲ್ಲಿ ಮುಂದೆ ಏಳು ಮೀಟರ್‌ವರೆಗೆ ನೀರು ನಿಲ್ಲಿಸಲು ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಲಾಗುವುದು. ಸಂತ್ರಸ್ತರಿಗೆ ಶಾಶ್ವತ ಅಥವಾ ಬಾಡಿಗೆ ರೂಪದಲ್ಲಿ ಪರಿಹಾರ ಒದಗಿಸುವುದೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿದರು. ಮನಪಾ ಮಾಜಿ ಮೇಯರ್ ಶಶಿಧರ ಹೆಗ್ಡೆ, ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು.







