ಮದ್ರಸ ಅಧ್ಯಾಪಕನ ಕೊಲೆ: ಕಾಸರಗೋಡಿನಲ್ಲಿ ಹರತಾಳ

ಕಾಸರಗೋಡು, ಮಾ.21: ಮದ್ರಸ ಅಧ್ಯಾಪಕ ಮಡಿಕೇರಿಯ ರಿಯಾಝ್ ಕೊಲೆಯನ್ನು ಖಂಡಿಸಿ ಮಂಗಳವಾರ ಕಾಸರಗೋಡು ತಾಲೂಕಿನಲ್ಲಿ ಮುಸ್ಲಿಂ ಲೀಗ್ ಕರೆ ನೀಡಿರುವ ಹರತಾಳದಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಬಸ್ಸು ಸೇರಿದಂತೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ನಡುವೆ ವಾರ್ಷಿಕ ಪರೀಕ್ಷೆ ನಡೆಯುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲು ಹರಸಾಹಸ ಪಡಬೇಕಾಯಿತು.
ಜಿಲ್ಲಾಧಿಕಾರಿಯವರು ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಿದ್ದರಿಂದ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಿದರು. ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಹರತಾಳ ಕರೆ ನೀಡಿದ ಬಗ್ಗೆ ಮಾಹಿತಿ ಇರಲಿಲ್ಲ. ಬೆಳಗ್ಗೆಯಷ್ಟೇ ಮುಸ್ಲಿಂ ಲೀಗ್ ಹರತಾಳಕ್ಕೆ ಕರೆ ನೀಡಿತ್ತು. ಬಸ್ಸು ಹಾಗೂ ವಾಹನ ಸಂಚಾರ ಇಲ್ಲದೆ ಜನಸಾಮಾನ್ಯರು ಪರದಾಡಬೇಕಾಯಿತು.
ಅಲ್ಲಲ್ಲಿ ಘರ್ಷಣೆ , ರಸ್ತೆ ತಡೆ, ಕಲ್ಲೆಸೆತ
ಹರತಾಳದ ಹಿನ್ನಲೆಯಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿವೆ. ಕಾಸರಗೋಡು ನಗರ , ಚೆರ್ಕಳ , ತಳಂಗರೆ , ಎಡನೀರು ಸೇರಿದಂತೆ ಹಲವಡೆ ರಸ್ತೆಗೆ ಕಲ್ಲು ಮತ್ತು ಮರಗಳನ್ನಿಟ್ಟು ರಸ್ತೆ ತಡೆ ನಡೆಸಲಾಗಿತ್ತು. ವಾಹನಗಳು ಸಂಚರಿಸಲು ಅನುವು ಮಾಡಿಕೊಡದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ, ಘರ್ಷಣೆಗಳು ನಡೆದಿವೆ.
ವಿದ್ಯಾನಗರ , ಚೆರ್ಕಳ , ನಾಲ್ಕನೆ ಮೈಲು ಮೊದಲಾದೆಡೆ ಖಾಸಗಿ ವಾಹನಗಳನ್ನು ತಡೆದ ಘಟನೆ ನಡೆಯಿತು ಮಂಗಳೂರಿನಿಂದ ಕಾಸರಗೋಡಿಗೆ ಬರುವ ಬಸ್ಸು ಹಾಗೂ ಇತರ ವಾಹನಗಳು ಕುಂಬಳೆ ತನಕ ಸಂಚರಿಸಿದವು. ಕೆಲವಡೆ ಮನೆಗಳ ಮೇಲೆ ಕಲ್ಲೆಸೆದ ಘಟನೆಯೂ ನಡೆದಿದೆ.
ಮುಂಜಾಗ್ರತಾ ಕ್ರಮವಾಗಿ ಕಾಸರಗೋಡು ಹಾಗೂ ಹೊರವಲಯದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಂಜೆ ನಾಲ್ಕು ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಕರೆಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಡಿವೈಎಸ್ಪಿ ವಿ.ಸುಕುಮಾರನ್ ನೇತೃತ್ವದ ವಿಶೇಷ ತಂಡವನ್ನು ತನಿಖೆಗೆ ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ನಿವಾಸಿಯೋರ್ವನ ಸುಳಿವಿನಂತೆ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆಗೆ ಕಾರಣವೇನೆಂಬುದು ಸ್ಪಷ್ಟಗೊಂಡಿಲ್ಲ. ವೈಯುಕ್ತಿಕ ದ್ವೇಷ ಅಥವಾ ಇನ್ಯಾವುದೇ ಕಾರಣವಾಗಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು , ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಉತ್ತರ ವಲಯ ಎಡಿಜಿಪಿ ರಾಜೇಶ್ ದಿವಾನ್ , ಕಣ್ಣೂರು ವಲಯ ಐ ಜಿ ಮಹಿಪಾಲ್ ನೇತೃತ್ವದ ತಂಡವು ಕಾಸರಗೋಡಿನಲ್ಲಿ ಮೊಕ್ಕಾ೦ ಹೂಡಿದ್ದು , ಸ್ಥಿತಿ ಗತಿಗಳ ಅವಲೋಕನ ನಡೆಸುತ್ತಿದೆ







