ಹಳೆಯ ನೋಟುಗಳ ವಿನಿಮಯಕ್ಕೆ ಮಾ.31 ಅಂತಿಮ ಗಡುವು ಎಂದು ಪ್ರಧಾನಿ ಮೋದಿಯವರೇ ಹೇಳಿದ್ದರು:ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಮಾ.21: 2016,ಡಿ.31ಕ್ಕೆ ಮೊದಲು ನಿಷೇಧಿತ 500 ಮತ್ತು 1,000 ರೂ.ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲಾಗದವರು ತಮ್ಮ ವೈಫಲ್ಯಕ್ಕೆ ಪ್ರಾಮಾಣಿಕವಾದ ಕಾರಣಗಳನ್ನು ಹೊಂದಿದ್ದರೂ ಅವರಿಗೆ ಸಮಯಾವಕಾಶವನ್ನೇಕೆ ನೀಡಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.
ಕಳೆದ ವರ್ಷದ ನ.8ರಂದು ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯದ ದಿಢೀರ್ ನಿರ್ಧಾರವನ್ನು ಪ್ರಕಟಿಸಿ ಮಾಡಿದ್ದ ಭಾಷಣವನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು, ಸಮಸ್ಯೆಗಳಿದ್ದವರಿಗೆ ಹಳೆಯ ನೋಟುಗಳನ್ನು ಠೇವಣಿ ಮಾಡಲು ಮಾ.31ರವರೆಗೂ ಸಮಯಾವಕಾಶ ದೊರೆಯಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದರು ಎಂದು ನೆನಪಿಸಿತು.
ನಿಮಗೆ ವಿವೇಚನಾಧಿಕಾರವಿರಬಹುದು, ಆದರೆ ಅದು ನಿರಂಕುಶಾಧಿಕಾರವಾಗ ಬಾರದು. ನಿಮ್ಮ ಹೇಳಿಕೆ ನೋಡಿದರೆ ನೀವೇ ಅಂತಿಮವಾಗಿರುವಂತಿದೆ, ಆದರೆ ಇದನ್ನೊಪ್ಪಲು ನಾವು ಸಿದ್ಧರಿಲ್ಲ ಎಂದು ಪೀಠವು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ತಿರುಗೇಟು ನೀಡಿತು. ಹಳೆಯ ನೋಟುಗಳ ಠೇವಣಿಗೆ ಅವಕಾಶ ಪಡೆಯಬಹುದಾದ ವರ್ಗವನ್ನು ವ್ಯಾಖ್ಯಾನಿಸುವ ಆಯ್ಕೆಯನ್ನು ಸಂಸತ್ತು ಸರಕಾರಕ್ಕೇ ಬಿಟ್ಟಿತ್ತು ಮತ್ತು ನಾವು ಅನಿವಾಸಿ ಭಾರತೀಯರಿಗೆ ಹಳೆಯ ನೋಟುಗಳನ್ನು ಜಮಾ ಮಾಡಲು ಮಾ.31ರವರೆಗೆ ಅವಕಾಶ ನೀಡಿದ್ದೇವೆ ಎಂದು ಅವರು ಹೇಳಿದ್ದರು.
ಡಿ.31ರ ಬಳಿಕ ಆರ್‌ಬಿಐ ನಿಯೋಜಿತ ಬ್ಯಾಂಕುಗಳಲ್ಲಿ ಹಳೆಯ ನೋಟುಗಳನ್ನು ಜಮೆ ಮಾಡಲು ತಮಗೆ ಅವಕಾಶವನ್ನು ನಿರಾಕರಿಸಿರುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿದೆ.
ಸರಕಾರವು ಡಿ.30ರಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ ನಿಗದಿತ ಮಿತಿಗಿಂತ ಹೆಚ್ಚಿನ ನಿಷೇಧಿತ ನೋಟುಗಳನ್ನು ಹೊಂದಿರುವುದನ್ನು ಅಪರಾಧವನ್ನಾಗಿ ಮಾಡಿತ್ತ ಲ್ಲದೆ, ಇದನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿತ್ತು.
ಬ್ಯಾಂಕುಗಳಲ್ಲಿ ಹಳೆಯ ನೋಟುಗಳ ಠೇವಣಿಗೆ ಅವಕಾಶವನ್ನು ಅಂತ್ಯಗೊಳಿಸುವ ಯಾವುದೇ ಸೂಚನೆಯನ್ನು ಜನರಿಗೆ ನೀಡದೇ ಡಿ.30ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಸರಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ ನ್ಯಾಯಾಲಯವು, ಸುಗ್ರೀವಾಜ್ಞೆಯು ಒಂದು ವಾರ ಮೊದಲು ಹೊರಬಿದ್ದಿದ್ದರೆ ಜನರಿಗೆ ಕಾಲಾವಕಾಶ ಲಭಿಸುತ್ತಿತ್ತು. ನೋಟುಗಳನ್ನು ಜಮೆ ಮಾಡಲು ಇನ್ನಷ್ಟು ಕಾಲಾವಕಾಶ ದೊರೆಯಲಿದೆ ಎಂದು ಪ್ರಧಾನಿಯವರ ಭಾಷಣ ಮತ್ತು ಅಧಿಸೂಚನೆ ಯಿಂದ ಪ್ರತಿಯೊಬ್ಬರೂ ತಿಳಿದಿದ್ದರು. ಪ್ರಧಾನಿಯವರ ಭರವಸೆಯನ್ನೂ ಹಿಂದೆಗೆದು ಕೊಳ್ಳಲಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ ಎಂದು ಮು.ನ್ಯಾ.ಖೇಹರ್ ಹೇಳಿದರು.
ಅನಿವಾಸಿ ಭಾರತೀಯರಿಗೆ ಮಾತ್ರ ಮಾ.31ರವರೆಗೆ ಸಮಯಾವಕಾಶ ನೀಡಿ,ಇತರ ಪ್ರಜೆಗಳಿಗೆ ಏಕೆ ಅವಕಾಶ ನೀಡಿಲ್ಲ ಎನ್ನುವುದನ್ನು ಸರಕಾರವು ವಿವರಿಸಲೇಬೇಕು ಎಂದು ಹೇಳಿದ ಪೀಠವು, ಈ ಬಗ್ಗೆ ಎ.11ರೊಳಗೆ ಪ್ರಮಾಣಪತ್ರವನ್ನು ಸಲ್ಲಿಸುವಂತೆ ನಿರ್ದೇಶ ನೀಡಿತು.
ಇದೇ ವೇಳೆ ಪ್ರಕರಣದಲ್ಲಿ ಸೋಲಾದರೆ ಕಾನೂನುಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅರ್ಜಿದಾರರಿಗೆ ಅದು ಎಚ್ಚರಿಕೆಯನ್ನೂ ನೀಡಿತು.
ಆದರೆ ಈ ಅರ್ಜಿದಾರರಿಗೆ ಹಳೆಯ ನೋಟುಗಳ ಠೇವಣಿಗೆ ಅವಕಾಶದ ಕೊಡುಗೆಯನ್ನು ಮುಂದಿರಿಸಿದ ರೋಹಟ್ಗಿ ಅವರು, ಅರ್ಜಿದಾರು ತಮ್ಮ ಅರ್ಜಿಗಳನ್ನು ಹಿಂದೆಗೆದುಕೊಂಡರೆ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದರು.