ಕೆಎಲ್ 01 ಸಿಬಿ1 ಫ್ಯಾನ್ಸಿ ಕಾರ್ ನಂ.ಗಾಗಿ ಬರೋಬ್ಬರಿ 18 ಲ.ರೂ.ತೆತ್ತ ಕೇರಳದ ಉದ್ಯಮಿ!

ತಿರುವನಂತಪುರ,ಮಾ.21: ನಗರದ ಉದ್ಯಮಿಯೋರ್ವರು ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್‌ಯುವಿ)ಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಪಡೆಯಲು 18 ಲ.ರೂ.ಗಳ ದಾಖಲೆ ಹರಾಜು ಮೊತ್ತವನ್ನು ಪಾವತಿಸಿದ್ದಾರೆ.
ಕೆಎಲ್ 01 ಸಿಬಿ1 ನಂಬರ್ ಪಡೆಯಲು ಔಷಧಿ ಸಂಸ್ಥೆ ಮಾಲಿಕ ಕೆ.ಎಸ್. ಬಾಲಗೋಪಾಲ್ ಅವರು ಪಾವತಿಸಿರುವ ಮೊತ್ತ ರಾಜ್ಯದಲ್ಲಿಯೇ ಗರಿಷ್ಠವಾಗಿದೆ. ಹಿಂದಿನ ದಾಖಲೆಯಲ್ಲಿ ತ್ರಿಶೂರಿನಲ್ಲಿ ಫ್ಯಾನ್ಸಿ ನಂಬರ್‌ವೊಂದು 16.50 ಲ.ರೂ.ಗೆ ಮಾರಾಟವಾಗಿತ್ತು.
ಆರು ವರ್ಷಗಳ ಹಿಂದೆ ಎಕೆ ಸರಣಿಯ ನಂಬರ್‌ಗಳು ಎಂಟು ಲ.ರೂ.ಗಳನ್ನು ಗಳಿಸಿದ್ದವು. ಕೇಂದ್ರ ತನಿಖಾ ಸಂಸ್ಥೆಯ ಸಂಕ್ಷಿಪ್ತ ರೂಪ ‘ಸಿಬಿಐ’ ಅನ್ನು ಹೋಲುವ ಸಿಬಿ1 ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿಸಿದೆ.
ಹರಾಜಿನಲ್ಲಿ ಒಂದು ಲಕ್ಷ ರೂ.ನ ಮೂಲಬೆಲೆಯನ್ನು ನಿಗದಿಗೊಳಿಸ ಲಾಗಿದ್ದು, ಮೊದಲ ಸುತ್ತಿನಲ್ಲಿ 18 ಜನರು ಭಾಗವಹಿಸಿದ್ದರು, ಆದರೆ ಮೊತ್ತ 10 ಲ.ರೂ.ದಾಟಿದಾಗ ಮೂವರು ಮಾತ್ರ ಉಳಿದುಕೊಂಡಿದ್ದರು. ಅಂತಿಮವಾಗಿ ಬಾಲಗೋಪಾಲ್ ತನ್ನ ಒಂದು ಕೊಟಿಗೂ ಅಧಿಕ ವೌಲ್ಯದ ಟೊಯೊಟಾ ಲ್ಯಾಂಡ್ ಕ್ರುಯಿಸರ್‌ಗಾಗಿ 18 ಲ.ರೂ.ತೆತ್ತು ಫ್ಯಾನ್ಸಿ ನಂಬರ್‌ನ್ನು ತನ್ನದಾಗಿಸಿಕೊಂಡರು.
ಇತರ 27 ಫ್ಯಾನ್ಸಿ ನಂಬರ್‌ಗಳನ್ನೂ ಹರಾಜಿಗಿಡಲಾಗಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಮೋಟಾರು ವಾಹನಗಳ ಇಲಾಖೆ ಈ ಪ್ರಕ್ರಿಯೆಯ ಮೂಲಕ 27 ಲ.ರೂ.ಗಳ ಆದಾಯ ಗಳಿಸಿದೆ.
ರಾಜ್ಯದಲ್ಲಿ ಹಲವಾರು ಶ್ರೀಮಂತರು ಫ್ಯಾನ್ಸಿ ನಂಬರ್‌ಗಳಿಗಾಗಿ ತಮ್ಮ ಕಾರಿನ ವೌಲ್ಯಕ್ಕಿಂತಲೂ ಹೆಚ್ಚಿನ ಹಣ ಪಾವತಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಕೊಚ್ಚಿಯ ಮಾರುತಿ ಸ್ವಿಫ್ಟ್ ಕಾರಿನ ಮಾಲಿಕ ತನ್ನ ನೆಚ್ಚಿನ ನಂಬರ್ ಪಡೆಯಲು ಕಾರಿನ ಬೆಲೆಗೂ ಹೆಚ್ಚಿನ ಹಣವನ್ನು ನಿಡಿದ್ದ.
ಇದಿಷ್ಟೇ ಅಲ್ಲ,ತಮ್ಮ ಇಷ್ಟದ ನಂಬರ್‌ಗಳಿಗಾಗಿ ಜನರು ಪರಸ್ಪರ ಹೊಯ್ ಕೈಗೆ ಇಳಿದಿದ್ದೂ ಇದೆ.
ಈ ವರ್ಷದ ಜನವರಿಯಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವಯ್ಯೂರಿನ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಆಡಳಿತ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ನಾಯಕರು ನಂಬರ್‌ಗಾಗಿ ಹೊಡೆದಾಟಕ್ಕೇ ಇಳಿದಿದ್ದರು. ಅಂದು ಎಪಿ 16 ಡಿಡಿ 7777 ನಂಬರ್ 60,000 ರೂ.ಗೆ ಮಾರಾಟವಾಗಿತ್ತು.