" ಉತ್ತರ ಪ್ರದೇಶದಲ್ಲಿ ಬಹಳಷ್ಟು ಬಂದ್ ಆಗಲಿವೆ "
ಸಿಎಂ ಆದ ಬಳಿಕ ಸಂಸತ್ತಿನಲ್ಲಿ ಮಾತನಾಡಿದ ಆದಿತ್ಯನಾಥ್

ಹೊಸದಿಲ್ಲಿ, ಮಾ. 21 : ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಲೋಕಸಭೆಗೆ ಆಗಮಿಸಿದರು. ಉತ್ತರ ಪ್ರದೇಶದ ಗೋರಕ್ ಪುರ ಕ್ಷೇತ್ರದಿಂದ ಐದನೇ ಬಾರಿ ಸಂಸದರಾಗಿರುವ ಆದಿತ್ಯನಾಥ್ ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶೇಷವೆಂದರೆ, ಈ ಬಾರಿ ಅವರು ತಮ್ಮ ಇಂದಿನ ಆಕ್ರಮಣಕಾರಿ ಧೋರಣೆ ಬಿಟ್ಟು ಶಾಂತಚಿತ್ತರಾಗಿ, ನಗುಮುಖದೊಂದಿಗೆ ಮಾತನಾಡಿದರು.
ಇದೇ ಮೊದಲ ಬಾರಿ ಚುನಾವಣೆಯಲ್ಲಿ ಒಬ್ಬ ನಾಯಕನನ್ನು ಬಿಂಬಿಸಿ ಗೆಲ್ಲಲಾಗಿದೆ ಎಂದು ಹೇಳಿದ ಆದಿತ್ಯನಾಥ್, ಕೇಂದ್ರ ಸರ್ಕಾರ , ಪ್ರಧಾನಿ ಮೋದಿ ಹಾಗು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಹಾಡಿ ಹೊಗಳಿದರು. ಕೇಂದ್ರ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದು ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿದೆ ಎಂದು ಹೇಳಿದರು.
" ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಬ್ಕ ಸಾಥ್ , ಸಬ್ಕ ವಿಕಾಸ್ ಸಿದ್ಧಾಂತದಲ್ಲಿ ಕಾರ್ಯ ನಿರ್ವಹಿಸುವುದಾಗಿ " ಈ ಸಂದರ್ಭದಲ್ಲಿ ಅವರು ಹೇಳಿದರು. " ಈ ಹಿಂದೆ ಕೇಂದ್ರದಿಂದ ಕಳಿಸಿದ ಹಣ ಉತ್ತರ ಪ್ರದೇಶದಲ್ಲಿ ಸರಿಯಾಗಿ ಬಳಕೆಯಾಗಿಲ್ಲ . ನಾವು ಅಲ್ಲಿಯ ಪ್ರತಿ ನಾಗರೀಕ ಹಾಗು ಪ್ರತಿ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇವೆ " ಎಂದು ಹೇಳಿದರು.
ರಾಹುಲ್ ಗಾಂಧಿ ಯನ್ನು ಕುಟುಕಿದ ಆದಿತ್ಯನಾಥ್ ಅವರು " ನಾನು ರಾಹುಲ್ ಜೀ ಗಿಂತ ಒಂದು ವರ್ಷ ಚಿಕ್ಕವನು, ಅಖಿಲೇಶ್ ಗಿಂತ ಒಂದು ವರ್ಷ ದೊಡ್ಡವನು. ಅವರಿಬ್ಬರ ಜೋಡಿ ವಿಫಲವಾಗಿ ನಾನು ಬಂದಿದ್ದೇನೆ " ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ ಅವರು " ನೀವು ಆಯ್ಕೆಯಾಗಿರುವ ಹುದ್ದೆಯ ಘನತೆಗೆ ತಕ್ಕಂತೆ ಕೆಲಸ ಮಾಡಿ " ಎಂದು ಸಲಹೆ ನೀಡಿದರು.
ವಿಪಕ್ಷದವರತ್ತ ನೋಡಿ ನಗುತ್ತಾ ಮಾತನಾಡಿದ ಅವರು " ಉತ್ತರ ಪ್ರದೇಶದಲ್ಲಿ ಇನ್ನು ಬಹಳಷ್ಟು ಬಂದ್ ಆಗಲಿವೆ . ಅದನ್ನು ಪ್ರಧಾನಿಯ ಕನಸಿನಂತೆ ರೂಪಿಸಲಾಗುವುದು. ಅದನ್ನು ಅರಾಜಕತೆ , ಗೂಂಡಾಗಿರಿ, ಭ್ರಷ್ಟಾಚಾರ ಹಾಗು ಅಪರಾಧಗಳಿಂದ ಮುಕ್ತ ಮಾಡಲಾಗುವುದು. ಅಲ್ಲಿ ಗಲಭೆಗಳನ್ನು ಬಂದ್ ಮಾಡಲಾಗುವುದು " ಎಂದು ಹೇಳಿದರು.







