ವಿನಾಯಕ ಬಾಳಿಗಾ ಹತ್ಯೆಗೆ ವರ್ಷ : ತನಿಖೆ ಚುರುಕುಗೊಳಿಸಲು ಆಗ್ರಹಿಸಿ ಮೆರವಣಿಗೆ

ಮಂಗಳೂರು, ಮಾ.21: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರು ಹತ್ಯೆಯಾಗಿ ಒಂದು ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿ ಬಾಳಿಗಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಮಂಗಳವಾರ ನಗರದ ವೆಂಕಟರಮಣ ದೇವಳ ಬಳಿಯಿಂದ ಬಾಳಿಗಾ ಅವರ ಮನೆಯವರೆಗೆ ಮೆರವಣಿಗೆ ನಡೆಯಿತು. ಬಳಿಕ ಕಲಾಕುಂಜ ಸಿಬಿಇಯು ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್, ಬಾಳಿಗಾ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ವಿಳಂಬವಾಗಿದೆ. ಪೊಲೀಸರು ತನಿಖೆಯನ್ನು ತ್ವರಿತವಾಗಿ ನಡೆಸಬೇಕೆಂದು ಆಗ್ರಹಿಸಿದರು.
ನಗರದ ವೆಂಕರಮಣ ದೇವಸ್ಥಾನ ಮತ್ತು ಕಾಶಿ ಮಠದ ಹಣದ ಅವ್ಯವಹಾರವನ್ನು ಬಯಲಿಗೆಳೆದಿರುವುದು ಬಾಳಿಗಾ ಕೊಲೆಗೆ ಕಾರಣವಾಗಿದೆ. ಸಮಾಜದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಕೊಲೆಯಾಗಿರುವುದು ವಿಷಾದನೀಯ. ಬಾಳಿಗಾರವರು ನಡೆದ ದಾರಿಯಲ್ಲೇ ಹೆಜ್ಜೆ ಹಾಕೋಣ. ಅನ್ಯಾಯದ ವಿರುದ್ಧ ಪ್ರತಿಭಟಿಸೋಣ ಎಂದರು.
ಕೊಲೆ ಪ್ರಕರಣದಲ್ಲಿ ಸತ್ಯ ಹೊರಬರಲು ಆರೋಪಿ ಎಂದು ಗುರುತಿಸಲಾಗಿರುವ ನಮೋ ಬ್ರಿಗೇಡ್‌ನ ಸ್ಥಾಪಕ ನರೇಶ್ ಶೆಣೈರ ಮಂಪರು ಪರೀಕ್ಷೆ ನಡೆಸಬೇಕೆದು ಬಾಳಿಗಾರ ತಂದೆ ಒತ್ತಾಯಿಸಿದ್ದರು. ಆದರೆ, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಒಂದು ವೇಳೆ ನಿರಪರಾಧಿಯಾಗಿದ್ದರೆ, ಮಂಪರು ಪರೀಕ್ಷೆಗೊಳಪಡಲು ಭಯವೇಕೆ ಎಂದು ನರೇಂದ್ರ ನಾಯಕ್ ಪ್ರಶ್ನಿಸಿದರು.
ಉಡುಪಿಯ ಮನೋರೋಗ ತಜ್ಞ ಡಾ. ಪಿ.ವಿ.ಭಂಡಾರಿ ಮಾತನಾಡಿ, ಮುಂದಿನ ಮಾರ್ಚ್ ತಿಂಗಳೊಳಗೆ ತನಿಖೆ ಚುರುಕುಗೊಂಡು ಎಲ್ಲಾ ಆರೋಪಿಗಳ ಬಂಧನವಾಗಲಿ ಎಂದು ಆಗ್ರಹಿಸಿದರು.
ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಗುರುಶಾಂತ್, ದೇಶದ ಸಂಸ್ಕೃತಿ, ದೇಶಪ್ರೇಮದ ಬಗ್ಗೆ ಮಾತನಾಡುತ್ತಿರುವವರೇ ದೇಶದ್ರೋಹಿಗಳಾಗುತ್ತಿದ್ದಾರೆ. ಜಾತಿ, ಧರ್ಮಗಳ ಬಗ್ಗೆ ಪ್ರಚೋದಿಸಿ ತಮ್ಮ ಕರಾಳ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ವಿನಾಯಕ ಬಾಳಿಗಾ ಅವರ ಸಹೋದರಿ ಅನುರಾಧಾ ಬಾಳಿಗಾ, ವಿವಿ ವಿಶ್ರಾಂತ ಕುಲಪತಿ ಡಾ.ಪಂಡಿತಾರಾಧ್ಯ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ದಸಂಸ ಮುಖಂಡ ಎಂ.ದೇವದಾಸ್, ಟಿ.ಆರ್.ಭಟ್ ಉಪಸ್ಥಿತರಿದ್ದರು.
‘ತನಿಖೆ ತ್ವರಿತಗೊಳಿಸಲು ಕೋರ್ಟ್‌ಗೆ ಅರ್ಜಿ’
ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತ್ವರಿತಗೊಳಿಸುವಂತೆ ಮಂಗಳೂರಿನ 3ನೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ನರೇಂದ್ರ ನಾಯಕ್ ತಿಳಿಸಿದರು.
ವಿನಾಯಕ ಬಾಳಿಗಾ ಅವರ ಸಹೋದರಿ ಅನುರಾಧಾ ಬಾಳಿಗಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪ್ರಕರಣದ ತನಿಖೆ ಚುರುಕುಗೊಳಿಸುವಂತೆ ಹಾಗೂ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿದ್ದಾರೆ ಎಂದು ನರೇಂದ್ರ ನಾಯಕ್ ತಿಳಿಸಿದರು.







