ಮಂಗಳೂರು ವಿ.ವಿ.2017-18ನೆ ಸಾಲಿಗೆ 5.81 ಕೋಟಿ ರೂ.ಗಳ ಕೊರತೆ ಮುಂಗಡ ಪತ್ರ ಮಂಡನೆ
ಮಂಗಳೂರು.ಮಾ,21:ಮಂಗಳೂರು ವಿಶ್ವ ವಿದ್ಯಾನಿಲಯ 2017-18ನೆ ಸಾಲಿಗೆ ಸಂಬಂಧಿಸಿದಂತೆ 5.81 ಕೋಟಿ ರೂ.ಗಳ ಕೊರತೆ ಮುಂಗಡ ಪತ್ರವನ್ನು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಂಡಿಸಲಾಯಿತು.
ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ಕುಲಪತಿ ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ ಆಯವ್ಯಯ ವರದಿಯನ್ನು ಮಂಡಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಬಿಡುಗಡೆಯಾಗುವ ಯೋಜನೇತರ ಮತ್ತು ಯೋಜನೆಯ ಬಾಬ್ತು ಅನುದಾನಗಳ ನಿರೀಕ್ಷೆಯೊಂದಿಗೆ ಈ ಸಾಲಿನಲ್ಲಿ ಒಟ್ಟು 287 .48 ಕೋಟಿ ರೂ ಅಂದಾಜಿಸಿದ್ದು,ಖರ್ಚು 290.30 ಕೋಟಿ ರೂ ಎಂದು ಅಂದಾಜಿಸಲಾಗಿದ್ದು ಕಳೆದ ಬಾರಿಗಿಂತ ಈ ಬಾರಿ 94ಲಕ್ಷ ಹೆಚ್ಚು ಕೊರತೆ ಬಜೆಟ್ ಆಗಿದೆ.2017-18ನೆ ಸಾಲಿನಲ್ಲಿ ಅಂದಾಜಿಸಲಾದ ಯೋಜನೇತರ ಆದಾಯ 177.13 ಕೋಟಿ ಆಗಿದ್ದು,2016-17ನೆ ಸಾಲಿಗಿಂತ 17.21 ಕೋಟಿ ಹೆಚ್ಚುವರಿ ಅನುದಾನ ನಿರೀಕ್ಷಿಸಲಾಗಿದೆ.ಇದರಿಂದ ರಾಜ್ಯ ಸರಕಾರದ ಯೋಜನೇತರ ಅನುದಾನ ಹಾಗೂ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹವಾಗುವ ಅನುದಾನಗಳನ್ನು ಪರಿಗಣಿಸಿದರೆ ಈ ಬಾರಿ ಶೇ 10.76 ಹೆಚ್ಚಾಗಿರುತ್ತದೆ.2017-18ನೆ ಸಾಲಿನಲ್ಲಿ ಯೋಜನೇತರ ಖರ್ಚು 170.82ಕೋಟಿ ರೂ ಗಳಾಗಿದ್ದು ಕಳೆದ ಬಾರಿಗಿಂತ 15.61 ಕೋಟಿ ಹೆಚ್ಚಾಗಿರುತ್ತದೆ ಶ್ರೀಪತಿ ಕಲ್ಲೂರಾಯ ತಿಳಿಸಿದರು.
ಯೋಜನೆಯ ಆದಾಯ ಶೇ 84 ಹೆಚ್ಚಳ:-ಈ ಬಾರಿ ಯುಜಿಸಿ,ರಾಷ್ಟ್ರೀಯ ಉನ್ನತ ಶಿಕ್ಷಣ ನಿಧಿ ಅಭಿಯಾನ, ದತ್ತಿನಿಧಿ,ಪ್ರಾಯೋಜಿತ ನಿಧಿಗಳು ಸೇರಿದಂತೆ ವಿವಿಧ ಯೋ ಜನೆಗಳ ಆದಾಯ 110.35 ಕೋಟಿ ರೂ ಅಂದಾಜಿಸಿದ್ದು, ಕಳೆದ ವರ್ಷಕ್ಕಿಂತ ಶೇ 84 ಏರಿಕೆಯಾಗಿದೆ.ಯೋಜನೆಯ ಖರ್ಚು 122.47ಕೋಟಿ ರೂ.ಗಳಾಗಿದ್ದು ಪ್ರಸಕ್ತ ಸಾಲಿನ ಖರ್ಚು 54.01 ಕೋಟಿ ರೂ ಹೆಚ್ಚಾಗಲಿದೆ.ನಿರೀಕ್ಷೆಯಂತೆ ಈ ಅನುದಾನ ಬಿಡುಗಡೆಯಾಗದಿದ್ದಲ್ಲಿ ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಬೇಕಾಗಬಹುದು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮಾತ್ರ ಕೈಗೊಳ್ಳಬೇಕಾಗುತ್ತದೆ. ಇದಲ್ಲದೆ ಕೆಲವು ಹೊಸ ಕಾಮಗಾರಿಗಳನ್ನು ಕೈ ಬಿಡಬೇಕಾಗಬ ಹುದು ಎಂದು ಶ್ರೀಪತಿ ಕಲ್ಲೂರಾಯ ತಿಳಿಸಿದರು.
63 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳು:-2017-18ನೆ ಸಾಲಿನಲ್ಲಿ 400 ಮೀಟರ್‌ನ ಟ್ರಾಕ್,ಅಂತಾರಾಷ್ಟ್ರೀಯ ಸಮುಚ್ಛಯ ನಿರ್ಮಾಣ,ತ್ಯಾಜ್ಯ ಸಂಸ್ಕರಣಾ ಘಟಕ,ಕಚೇರಿ ಸಂಕೀರ್ಣ,ತ್ಯಾಜ್ಯ ನೀರು ಸಂಸ್ಕರಣಾ ಘಟಕ,ಪರೀಕ್ಷಾ ಭವನ ನಿರ್ಮಾಣ,ಬೆಳಪು ಸ್ನಾತಕೋತ್ತರ ಕೇಂದ್ರದ ಆಬಿವೃದ್ಧಿ,ತೆಂಕ ನಿಡಿಯೂರು ಕಾಲೇಜ್ ಗೆ ಮೂಲಭೂತ ಸೌಕರ್ಯ ಸೇರಿದಂತೆ ವಿ ವಿಧ ಯೋಜನೆಗಳನ್ನು 63 ಕೋಟಿ ರೂ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು ವರದಿಯಲ್ಲಿ ಶ್ರೀಪತಿ ಕಲ್ಲೂರಾಯ ವಿವರಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ 11 ಹೊಸ ಕಾಲೇಜುಗಳು ಸಂಯೋಜನೆಗೆ ಅರ್ಜಿ ಸಲ್ಲಿಸಿತ್ತು.121 ಖಾಸಗಿ ಕಾಲೇಜುಗಳು,36 ಸರಕಾರಿ ಕಾಲೇಜುಗಳು ಸಂಯೋಜನೆಯ ನವೀಕರಣಕ್ಕೆ ಅರ್ಜಿಸಲ್ಲಿಸಿತ್ತು.ಮೂರು ಕಾಲೇಜುಗಳು ಶಾಶ್ವತ ಸಂಯೋಜನೆಗೆ ಅರ್ಜಿ ಸಲ್ಲಿಸಿತ್ತು.ಮಂಗಳೂರು ವಿ.ವಿಗೆ ಒಟ್ಟು 215 ಕಾಲೇಜುಗಳು ಸಂಯೋಜನೆಗೊಂಡಿದೆ.
ಈ ಪೈಕಿ 150 ಖಾಸಗಿ,37 ಸರಕಾರಿ,19 ಬಿಎಡ್‌ಮತ್ತುಇ ಬಿಪಿಎಡ್,5 ಸ್ವಾಯತ್ತ,ಹಾಗೂ 4 ಸಂಯುಕ್ತ ಕಾಲೇಜುಗಳು ಸೇರಿವೆ.ಹೊಸ ಸಂಯೋಜಿತ ಕಾಲೇಜುಗಳಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಸಂಜೆ ಕಾಲೇಜು,ಪನಾ ಕಾಲೇಜು ಬಜ್ಪೆ,ಅಲ್-ಇಹ್ಸಾನ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮೂಳೂರು ಉಡುಪಿ,ಸಂವಿತ್ ಎಜುಕೇಶನ್ ಇನ್ಸ್‌ಟ್ಯೂಟ್ ಮಂಗಳೂರು,ಸಂವೇದನಾ ಕಾಲೇಜು ಕುಂದಾಪುರ,ಅನುಗ್ರಹ ಮಹಿಳಾ ದರ್ಜೆ ಕಾಲೇಜು ಕುಶಾಲ ನಗರ,ಎ.ಜೆ.ಇನ್ಸ್‌ಟ್ಯೂಟ್ ಕುಂಟಿಕಾನ ಸಂಸ್ಥೆಯ ವಾಕ್ ಮತ್ತು ಶ್ರವಣ ಸಂಸ್ಥೆ,ಮೇದಾ ಕಾಲೇಜು ಪುತ್ತೂರು,ಎಸ್.ಎಸ್.ಡಿಗ್ರಿ ಕಾಲೇಜು ಕುಶಾಲನಗರ,ಹಾವರ್ಡ್ ಫಯರ್ ಆ್ಯಂಡ್ ಸೇಫ್ಟಿ ಸಂಸ್ಥೆ,ಕೂರ್ಗ್ ಇನ್ಸಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್‌ಗೆ ಹೊಸ ಸಂಯೋಜನೆಗೆ ಅನುಮತಿ ಸಲ್ಲಿಸಿತ್ತು ಈ ಸಂಸ್ಥೆಗಳಿಗೆ ಷರತ್ತು ಬದ್ದ ಅನುಮತಿಯನ್ನು ಸಭೆಯಲ್ಲಿ ನೀಡಲಾಯಿತು.ಮಂಗಳೂರು ವಿ.ವಿಯಲ್ಲಿ ಸಿಎಪಿಆರ್‌ಟಿ ಕೇಂದ್ರವನ್ನು ಆರಂಭಿಸುವ ಬಗ್ಗೆ ಕರಡು ಅನುಶಾಸನಕ್ಕೆ ಅನುಮತಿ ನೀಡಲಾಯಿತು.
ಸಭೆಯಲ್ಲಿ ಪರೀಕ್ಷಾಂಗ ಕುಲಸಚಿವ ಎ.ಎಸ್.ಖಾನ್,ಆಡಳಿತ ವಿಭಾಗದ ಕುಲಸಚಿವ ಕೆ.ಎಂ.ಲೋಕೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







