ಸಚಿವನಾಗಿದ್ದರೂ ಟಿವಿ ಶೋ ಬಿಡೆ: ಸಿಧು
ಕಾನೂನು ಸಲಹೆ ಕೇಳಲಿರುವ ‘ಕ್ಯಾಪ್ಟನ್’

ಹೊಸದಿಲ್ಲಿ,ಮಾ.21: ತಾನೀಗ ಪಂಜಾಬ್ ಸಚಿವನಾದರೂ ಟಿವಿ ಕಲಾವಿದನಾಗಿಯೂ ಮುಂದುವರಿಯುವುದಾಗಿ ನವ್‌ಜೋತ್‌ಸಿಂಗ್ ಸಿಂಗ್ ಸಿಧು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಸಚಿವನಾಗಿರುವ ಹಿನ್ನೆಲೆಯಲ್ಲಿ ಸಿಧು ಅವರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳು ವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್‌ಸಿಂಗ್ ಅಸಮ್ಮತಿ ವ್ಯಕ್ತಪಡಿಸಿದ್ದರು ಹಾಗೂ ಈ ಬಗ್ಗೆ ಕಾನೂನು ಸಲಹೆ ಕೇಳುವಂತೆ ಅವರಿಗೆ ಸೂಚಿಸಿದ್ದರು.
‘‘ನನ್ನ ಟಿವಿ ಶೋಗಳನ್ನು ಮೆಚ್ಚಿಯೇ ಜನರು ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಅದು ಯಾಕೆ ಬದಲಾಗಬೇಕು?’’ ಎಂದು ಮಾಜಿ ಕ್ರಿಕೆಟಿಗರೂ ಆಗಿರುವ ಸಿಧು ಹೇಳಿದ್ದಾರೆ. ಟಿವಿ ರಿಯಾಲಿಟಿ ಶೋಗಳಲ್ಲಿ ಸಿಧು ಭಾಗವಹಿಸಬಹುದೇ ಎಂಬ ಬಗ್ಗೆ ತನ್ನ ಸರಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಲಿದೆಯೆಂದು ಅಮ ರೀಂದರ್‌ಸಿಂಗ್ ಸೋಮವಾರ ತಿಳಿಸಿದ್ದ ಹಿನ್ನೆಲೆಯಲ್ಲಿ ಸಿಧು ಈ ಹೇಳಿಕೆ ನೀಡಿದ್ದಾರೆ.
‘‘ಸಚಿವರುಗಳು ನ್ಯಾಯವಾದಿಗಳಾಗಿ ಅಥವಾ ಪೈಲಟ್‌ಗಳಾಗಿ ಮುಂದುವರಿಯುತ್ತಿರುವ ಸಾಕಷ್ಟು ನಿದರ್ಶನಗಳಿದ್ದು, ಟಿವಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆಂಬ ಏಕೈಕ ಕಾರಣಕ್ಕಾಗಿ ಸಿಧು ವಿರುದ್ಧ ಯಾಕೆ ಗುರಿಯಿಡಬೇಕು?’’ ಎಂದು ಅವರ ನಿಕಟವರ್ತಿಗಳು ಪ್ರತಿಪಾದಿಸುತ್ತಾರೆ.
ಪಂಜಾಬ್‌ನಲ್ಲಿ ಕಳೆದ ವಾರ ಅಧಿಕಾರಕ್ಕೇರಿದ ಕಾಂಗ್ರೆಸ್ ಸರಕಾರದಲ್ಲಿ 53 ವರ್ಷ ವಯಸ್ಸಿನ ಸಿಧು ಅವರು, ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರೆನ್ನಲಾದ ಸಿಧು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯುವುದೆಂಬ ನಿರೀಕ್ಷೆಯಿದ್ದರೂ, ಅದು ತಲೆಕೆಳಗಾಗಿತ್ತು. ಅವರನ್ನು ಸ್ಥಳೀಯಾಡಳಿತ ಸಂಸ್ಥೆಗಳ ಖಾತೆಯನ್ನು ನೀಡಲಾಗಿತ್ತು.
ತನ್ನ ನಗೆಚಟಾಕಿಗಳಿಂದ ಜನಪ್ರಿಯರಾಗಿರುವ ಸಿಧು ಅವರು, ಹಲವು ವರ್ಷಗಳಿಂದ ಕಪಿಲ್ ಶರ್ಮಾ ಅವರ ಕಾಮಿಡಿ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.







