ಅಯೋಧ್ಯೆ ವಿವಾದ ಕೆದಕಿದ ವಿಎಚ್‌ಪಿ : ‘ರಾಮ್ ಮಹೋತ್ಸವ್ ಚಳವಳಿ’ಯ ಘೋಷಣೆ

ಹೊಸದಿಲ್ಲಿ,ಮಾ.21: ಉತ್ತರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಅಧಿಕಾರಕ್ಕೇರಿದ ಬೆನ್ನಲ್ಲೇ, ವಿಶ್ವಹಿಂದೂ ಪರಿಷತ್, ಅಯೋಧ್ಯೆ ವಿವಾದವನ್ನು ಮತ್ತೆ ಕೆದಕುವೆ ನೀಡಿದೆ.ತೀವ್ರವಾದಿ ಹಿಂದುತ್ವದ ಪ್ರತಿಪಾದಕ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದುದು ಹಾಗೂ ಬಾಬರಿ ಮಸೀದಿ ವಿವಾದಕ್ಕೆ ಸೌಹಾರ್ದಪೂರ್ಣ ಪರಿಹಾರ ಕಂಡುಹಿಡಿಯಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಸಮಯದಲ್ಲೇ ವಿಎಚ್‌ಪಿ ರಾಮಮಂದಿರ ಚಳವಳಿಯನ್ನು ಮತ್ತೆ ಆರಂಭಿಸುವ ಘೋಷಣೆ ಮಾಡಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ತಾನು ಮಾರ್ಚ್ 25ರಿಂದ ಎಪ್ರಿಲ್ 16ರವರೆಗೆ ರಾಮಮಹೋತ್ಸವ ಚಳವಳಿಯನ್ನು ನಡೆಸುವುದಾಗಿ ಅದು ಹೇಳಿದೆ.
‘‘ ಮಾರ್ಚ್ 28ರಂದು ಹಿಂದೂ ವರ್ಷ ಆರಂಭವಾಗಲಿದೆ. ಹೊಸ ವರ್ಷಕ್ಕೆ ಎರಡು ದಿನಗಳ ಮೊದಲು ನಾವು ರಾಮ್‌ಮಹೋತ್ಸವ್ ಎಂಬ ಚಳವಳಿಯನ್ನು ಆರಂಭಿಸಲಿದ್ದೇವೆ. ಈ ಚಳವಳಿಯ ಸಂದರ್ಭದಲ್ಲಿ ನಾವು ಹಳ್ಳಿಗಳಿಗೆ ತೆರಳಿ, ಶ್ರೀರಾಮಚಂದ್ರನು ಯಾವ ರೀತಿಯ ಬದುಕನ್ನು ನಡೆಸಿದ್ದ ಹಾಗೂ ಅದನ್ನು ಜನರು ಹೇಗೆ ಅನುಸರಿಸಬೇಕೆಂಬ ಬಗ್ಗೆ ನಾವು ಅರಿವು ಮೂಡಿಸಲಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರವು ಸಾಧ್ಯವಾದಷ್ಟೇ ಬೇಗನೇ ನಿರ್ಮಾಣಗೊಳ್ಳಬೇಕೆಂದು ಆಗ್ರಹಿಸಿ ಪ್ರತಿ ಹೋಬಳಿ ಹಾಗೂ ತಾಲೂಕುಗಳಲ್ಲಿ ನಾವು ಜಾಗರಣ ಯಾತ್ರೆಗಳನ್ನು ಆರಂಭಿಸಲಿದ್ದೇವೆ. ರಾಮಂದಿರ ನಿರ್ಮಾಣಕ್ಕೆ ಇನ್ನು ಯಾವುದೇ ವಿಳಂಬವಾಗದು’’ ಎಂದು ಪಶ್ಚಿಮ ಉತ್ತರಪ್ರದೇಶ ಹಾಗೂ ಉತ್ತರಖಂಡ ವಿಎಚ್‌ಪಿ ವಲಯ ಅಧ್ಯಕ್ಷ ಈಶ್ವರಿ ಪ್ರಸಾದ್ ಹೇಳಿದಾದರೆ.
‘‘ರಾಮ್ ಮಹೋತ್ಸವ್ ಒಂದು ರಾಷ್ಟ್ರವ್ಯಾಪಿ ಚಳವಳಿಯಾಗಲಿದ್ದು, ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಹಳ್ಳಿಗಳನ್ನು ನಾವು ತಲುಪಲಿದ್ದೇವೆ. ರಾಮಜನ್ಮಭೂಮಿಯಿರುವ ಉತ್ತರಪ್ರದೇಶದಲ್ಲಿ ನಾವು ಈ ಚಳವಳಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ಈ ಚಳವಳಿಯಲ್ಲಿ ಪಾಲ್ಗೊಳ್ಳಲಿರುವ ಎರಡು ಲಕ್ಷ ಹಳ್ಳಿಗಳ ಪೈಕಿ 70 ಸಾವಿರ ಹಳ್ಳಿಗಳು ಉತ್ತರಪ್ರದೇಶದಲ್ಲಿವೆ. ಶೀಘ್ರದಲ್ಲೇ ಈ ಹಳ್ಳಿಗಳಲ್ಲಿ ಮನೆಮನೆಗಳಲ್ಲೂ ಕೇಸರಿಬಣ್ಣದ ಧ್ವಜವನ್ನು ನೀವು ಕಾಣುವಿರಿ’’ ಎಂದರು.
ಅಯೋಧ್ಯಾ ಚಳವಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬೆಂಬಲ ನೀಡಲಿದ್ದಾರೆಂದು ಅವರು ಭರವಸೆ ವ್ಯಕ್ತಪಡಿಸಿದರು. ಶ್ರೀರಾಮ ಜನಿಸಿದ ಸ್ಥಳದಲ್ಲೇ ದೇವಾಲಯ ನಿರ್ಮಾಣವಾಗಬೇಕಿದ್ದು, ಆ ವಿಷಯದಲ್ಲಿ ಮುಖ್ಯಮಂತ್ರಿ ಯಾವುದೇ ರಾಜೀ ಮಾಡಿಕೊಳ್ಳಕೂಡದು ಎಂದು ಈಶ್ವರಿಪ್ರಸಾದ್ ಆಗ್ರಹಿಸಿದರು.