ಮೇ.7 : ಮರಾಠಿ ಸಂಘದಿಂದ ಉಚಿತ ಸಾಮೂಹಿಕ ವಿವಾಹ
ನೋಂದಾವಣಿ ಮಾಡಿಕೊಳ್ಳಲು ಎ.25 ರ ತನಕ ಅವಕಾಶ
ಪುತ್ತೂರು,ಮಾ.21 : ಪುತ್ತೂರು ಮರಾಠಿ ಸೇವಾ ಸಮಾಜದ ವತಿಯಿಂದ ಇಲ್ಲಿನ ಕೊಂಬೆಟ್ಟುನಲ್ಲಿರುವ ಮರಾಠಿ ಸಮಾಜ ಮಂದಿರದಲ್ಲಿ 4ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.5ರಂದು ನಡೆಯಲಿದ್ದು, ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧುವಿಗೆ ಚಿನ್ನದ ತಾಳಿ,ಬೆಳ್ಳಿಯ ಸರ,ಸೀರೆ ಮತ್ತು ರವಿಕೆ ಹಾಗೂ ವರನಿಗೆ ಧೋತಿ,ಶಾಲು,ಶರ್ಟ್,ಪೇಟವನ್ನು ಸಂಘದ ವತಿಯಿಂದ ನೀಡಲಾಗುವುದು. ಊಟೋಪಚಾರಗಳನ್ನು ಸಂಘದ ವತಿಯಿಂದಲೇ ಒದಗಿಸಲಾಗುವುದು ಎಂದು ಮರಾಟಿ ಸೇವಾ ಸಂಘದ ಅಧ್ಯಕ್ಷ ಪಿ.ಎಂ.ಕೃಷ್ಣ ನಾಯ್ಕ ಅವರು ತಿಳಿಸಿದರು.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಅವರು ಮಾಹಿತಿ ನೀಡಿದರು. ಮೇ.7ರಂದು ಪೂರ್ವಾಹ್ನ 10.50ರ ಕರ್ಕಾಟಕ ಲಗ್ನದ ಸುಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುವುದು. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ವಧು-ವರರು ಮರಾಟಿ ಜಾತಿಯವರೇ ಆಗಿರಬೇಕು ಎಂದರು. ಈಗಾಗಲೇ ಮೂರು ಜೊತೆ ವಧು-ವರರು ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಮರಾಠಿ ಜಾತಿಯವರಿಗೆ ಮುಕ್ತ ಅವಕಾಶವಿದ್ದು, ವಿವಾಹವಾಗಲು ಇಚ್ಚಿಸುವ ವಧು-ವರರು ಭಾವಚಿತ್ರ,ವಯಸ್ಸಿನ ದೃಢೀಕರಣ ಪತ್ರ, ವಾಸ ಸ್ಥಳದ ಪ್ರಮಾಣ ಪತ್ರ, ಪೋಷಕರಿಂದ ವಿವಾಹಯೋಗ್ಯ ಪ್ರಮಾಣ ಪತ್ರ, ವಧೂ-ವರರ ಒಪ್ಪಿಗೆ ಪತ್ರ ಹಾಗೂ ಪಂಚಾಯಿತಿನಿಂದ ದೃಢೀಕರಣ ಪತ್ರ ನೀಡಬೇಕು. ವಿವಾಹವಾಗಲು ಇಚ್ಚಿಸುವ ವಧು-ವರರು ಎಫ್ರಿಲ್ 25ರೊಳಗೆ ಸಂಘದ ಕಛೇರಿಯಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾಜದಲ್ಲಿನ ದುರ್ಬಲರಿಗೆ ಸಹಾಯಹಸ್ತ ನೀಡುತ್ತಾ ,ಸಮಾಜದ ಅಭಿವೃದ್ಧಿಗೆ ಪೂರಕವಾದ ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿರುವ ಮರಾಟಿ ಸೇವಾ ಸಂಘವು ಆಡಂಬರದ ವಿವಾಹವನ್ನು ಹಾಗೂ ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸಮೂಹಿಕ ವಿವಾಹ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದೆ. ಪ್ರಥಮ ವರ್ಷದಲ್ಲಿ 10 ಜೋಡಿ, ದ್ವಿತೀಯ ವರ್ಷದಲ್ಲಿ 5 ಜೋಡಿ ಹಾಗೂ ತೃತೀಯ ವರ್ಷದಲ್ಲಿ 6 ಜೋಡಿಯ ವಿವಾಹ ನಡೆದಿದೆ ಎಂದು ಅವರು ತಿಳಿಸಿದರು.
ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಬಿ.ಶೀನಪ್ಪ ನಾಯ್ಕ, ಖಜಾಂಜಿ ಕೆ.ಸುಬ್ರಾಯ ನಾಯ್ಕ, ವಿವಾಹ ವೇದಿಕೆಯ ಸಂಚಾಲಕ ಎಂ.ವೆಂಕಪ್ಪ ನಾಯ್ಕ ಹಾಗೂ ಸಂಘದ ಮಾಜಿ ಕಾರ್ಯದರ್ಶಿ ಮಂಜುನಾಥ್ ಎನ್,ಎಸ್ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







