ಸೇನಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಕಳವಳ ವ್ಯಕ್ತಪಡಿಸಿದ ಸಂಸದರು

ಹೊಸದಿಲ್ಲಿ,ಮಾ.21: ಪುಣೆ ವಲಯದಲ್ಲಿ ಸೇನೆಯ ‘ಇತರ ಹುದ್ದೆಗಳ ’ಭರ್ತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಸೋರಿಕೆಯ ಬಗ್ಗೆ ಮಂಗಳವಾರ ರಾಜ್ಯಸಭೆಯಲ್ಲಿ ಸದಸ್ಯರು ಕಳವಳಗಳನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದು ಸರಕಾರವು ತಿಳಿಸಿತು.
ಪುಣೆ ವಲಯದಲ್ಲಿ ಮಾತ್ರ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು, ಸೇನೆಯ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆಯನ್ನು ನಡೆಸುತ್ತಿದ್ದಾರೆ ಎಂದು ಸಹಾಯಕ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಅವರು ಸದನದಲ್ಲಿ ತಿಳಿಸಿದರು. ಫೆಬ್ರವರಿಯಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಈ ಸೋರಿಕೆಯ ಬಳಿಕ ರದ್ದುಗೊಳಿಸಲಾಗಿತ್ತು.
ಪ್ರಾಯೋಗಿಕ ನೆಲೆಯಲ್ಲಿ ಅಂಬಾಲಾ,ಚೆನ್ನೈ ಮತ್ತು ಜೈಪುರ ನೇಮಕ ವಲಯಗಳಲ್ಲಿ ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆಯನ್ನು ನಡೆಸಲು ಸರಕಾರವು ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.
ಆಗಿನ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರ ತವರು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಹುಟ್ಟೂರು ನಾಗ್ಪುರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳು ನಡೆದಿರುವುದರಿಂದ ಈ ಜಾಲದ ಹಿಂದಿರುವ ದುಷ್ಕರ್ಮಿಗಳ ಎದೆಗಾರಿಕೆಯನ್ನು ಗಮನಿಸಬೇಕಿದೆ ಎಂದು ಶಿವಸೇನೆಯ ಸಂಜಯ್ ರೌತ್ ಹೇಳಿದರು.
ಇಂತಹ ಪರೀಕ್ಷೆಗಳಲ್ಲಿ ದೊಡ್ಡ ಪ್ರಮಾಣದ ಪಿತೂರಿ ನಡೆಯುತ್ತದೆ ಮತ್ತು ಇಂತಹುದೇ ಕಾರ್ಯತಂತ್ರ ಮಧ್ಯಪ್ರದೇಶದ ವ್ಯಾಪಂ ಹಗರಣದಲ್ಲಿಯೂ ಬಳಕೆಯಾಗಿತ್ತು ಎಂದು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಹೇಳಿದರು.







