ನಿರಂತರ ದಂತ ಶಿಕ್ಷಣ (ಸಿಡಿಇ) ಕಾರ್ಯಕ್ರಮ

ಉಳ್ಳಾಲ,ಮಾ.21: ವೃತ್ತಿಪರ ನೀತಿ ಸಂಹಿತೆಗಳು ಶ್ರೀಮಂತಗೊಳ್ಳುತ್ತಿದೆ. ದಂತ ವೈದ್ಯರಿಗೆ ಡೆಂಟಲ್ ಕೌನ್ಸಿಲ್, ನ್ಯಾಂಧೀಶರುಗಳಿಗೆ ಬಾರ್ ಕೌನ್ಸಿಲ್, ಎಂಸಿಐ ಕೌನ್ಸಿಲ್ ವೈದ್ಯರುಗಳ ಸಾಧಕ ಬಾಧಕ ವ್ಯವಸ್ಥೆಗೆ ಅನುಗುಣವಾಗಿ ಕಾರ್ಯಾಚರಿಸುತ್ತಿದೆ. ಇದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯೂ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಾಚರಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಡೆಂಟೋಫೇಶಿಯಲ್ ಎಂಡ್ ಸ್ಟೊಮೊಟೋಗ್ನಾಟಿಕ್ ಸೈನ್ಸ್ ಆಶ್ರಯದಲ್ಲಿ ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಇದರ ಸಹಯೋಗದಲ್ಲಿ ಕಾಲೇಜಿನ ವಿಶಂತಿ ಭವನದಲ್ಲಿ ಮಂಗಳವಾರ ನಡೆದ ಡೆಂಟಲ್ ಆ್ಯಸ್ಪೆಕ್ಟ್ ಇನ್ ಡೆಂಟಲ್ ಪ್ರಾಕ್ಟಿಸ್ ವಿಚಾರದಲ್ಲಿ ನಿರಂತರ ದಂತ ಶಿಕ್ಷಣ (ಸಿಡಿಇ) ಕಾರ್ಯಕ್ರಮ ಮತ್ತು ಫಾರೆನ್ಸಿಕ್ ಓಡೊಂಟೋಲೋಜಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಕೀಯ ಸೇವೆಯಲ್ಲಿ ಚಿಕಿತ್ಸಾ ವೆಚ್ಚಗಳು ಜನರಿಗೆ ಮುಟ್ಟದ ರೀತಿಯಲ್ಲಿ ದುಬಾರಿಯಾಗಿದ್ದು, ಈ ನಿಟ್ಟಿನಲ್ಲಿ ಕೌನ್ಸಿಲ್ ಗಳು ಇವುಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಯತ್ನಿಸುವ ಮೂಲಕ ಗ್ರಾಹಕರಿಗೆ ಉಪಯುಕ್ತವಾಗುವಂತೆ ಕಾರ್ಯಾಚರಿಸಬೇಕಿದೆ ಎಂದರು. ಲೋಕಾಯುಕ್ತನಾಗಿ ಐದು ವರ್ಷದ ಅನುಭವದಲ್ಲಿ ದುರಾಸೆಯಿಂದ ದೇಶ ಅಧಿಪತನಕ್ಕೆ ಸಾಗುತ್ತಿರುವುದನ್ನು ಮನಗಂಡಿದ್ದೇನೆ. ಸಮಾಜ ಕಳೆದುಕೊಂಡಿರುವ ಮೌಲ್ಯವನ್ನು ಯುವಸಮುದಾಯದ ವಿದ್ಯಾರ್ಥಿಗಳು ಮರುಕಳಿಸಬೇಕಿದೆ ಎಂದರು.
1950 ರಲ್ಲಿ ಜೀಪ್ ಹಗರಣದಲ್ಲಿ ರೂ. 52 ಲಕ್ಷ, ಬೋಫೋಸ್‌ರ್ ಹಗರಣ 62 ಕೋಟಿ, ಕಾಮನ್ ವೆಲ್ತ್ ಗೇಮ್ಸ್ ಹಗರಣದಲ್ಲಿ ರೂ. 70,000 ಕೋಟಿ, 2ಜಿ ಹಗರಣದಲ್ಲಿ 1,86,000 ಕೋಟಿ ಹೀಗೆ ಸಿಎಜಿ ನೀಡಿದ ವರದಿಯಂತೆ ಸರಕಾರದ ಬೊಕ್ಕಸದಿಂದ ಕೋಟ್ಯಂತರ ಹಣವನ್ನು ದೋಚಲಾಗಿದೆ. ಆದರೆ ಬಜೆಟಿನಲ್ಲಿ ಜನರ ಅಭಿವೃದ್ಧಿಗೆ ಕೇವಲ ರೂ. 1, 62,000 ಕೋಟಿ ಹಣ ಮಾತ್ರ ವ್ಯಯಿಸಲಾಗುತ್ತಿದೆ. ಅಂದು ಸರಕಾರ ರೂ.1 ನೀಡಿದಲ್ಲಿ 15 ಪೈಸೆ ಮಾತ್ರ ಬಡವರಿಗೆ ಮುಟ್ಟುತ್ತಿತ್ತು ಎಂದು ಖುದ್ದು ಆಗಿನ ಪ್ರಧಾನಿ ದಿ. ರಾಜೀವ ಗಾಂಧಿಯೇ ತಿಳಿಸಿದ್ದರು. ಹೀಗೆ ಮುಂದುವರಿದಲ್ಲಿ ದೇಶವನ್ನು ದೋಚುವವರ ಸಂಖ್ಯೆಯೇ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಯುವಜನಾಂಗ ಜಾಗೃತರಾಗಿ ಪ್ರಾಮಾಣಿಕರಿಗೆ ಗೌರವಿಸುವಂತಹ ವಾತಾವರಣವನ್ನು ಸಮಾಜದಲ್ಲಿ ನಿರ್ಮಿಸುವಲ್ಲಿ ಪ್ರಯತ್ನಿಸಬೇಕಿದೆ ಎಂದರು.
ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಹಾಗೂ ಪ್ರಿನ್ಸಿಪಲ್ ಡಿಸ್ಟ್ರಿಕ್ಸ್ ಎಂಡ್ ಸೆಷನ್ಸ್ ಜಡ್ಜ್ ಕೆ.ಎಸ್. ಬಿಳಗಿ ಮಾತನಾಡಿ ಋಣಾತ್ಮಕ ಚಿಂತನೆಗಳನ್ನು ದೂರವಿರಿಸಿ ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಾಚರಿಸುವ ಅಗತ್ಯತೆ ಇದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ , ಕ್ಯಾಡ್ಸ್‌ನ ನಿರ್ದೇಶಕ ಪ್ರೊ. ಎನ್. ಶ್ರೀಧರ್ ಶೆಟ್ಟಿ, ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ. ಬಿ. ರಾಜೇಂದ್ರ ಕುಮಾರ್, ಉಪ ಪ್ರಾಂಶುಪಾಲೆ ಪ್ರೊ. ಮಿತ್ರ ಎನ್. ಹೆಗ್ಡೆ, ಸಂಯೋಜಕರಾದ ಪ್ರೊ.ಸುಭಾಷ್ ಬಾಬು, ಪ್ರೊ.ಪುಷ್ಪರಾಜ್ ಶೆಟ್ಟಿ, ಸೀನಿಯರ್ ಸಿವಿಲ್ ಜಡ್ಜ್ ಮತ್ತು ಲೀಗಲ್ ಸರ್ವೀಸ್ ಅಥಾರಿಟಿ ಆಫ್ ದಕ್ಷಿಣ ಕನ್ನಡ ಇದರ ಕಾರ್ಯದರ್ಶಿ ಮಲ್ಲನ ಗೌಡ ಉಪಸ್ಥಿತರಿದ್ದರು.
ಅಡ್ವೋಕೇಟ್, ಅಡಿಷನಲ್‌ಡಿಸ್ಟ್ರಿಕ್ ಗವರ್ನಮೆಂಟ್ ಪ್ಲೆಡರ್ ಮನೋರಾಜ್ ರಾಜೀವ ಮತ್ತು ಕ್ಷೇಮ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ.ಮಹಾಬಲ ಶೆಟ್ಟಿ ಉಪನ್ಯಾಸ ನೀಡಿದರು.
ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಯು.ಎಸ್.ಕೃಷ್ಣನಾಯಕ್ ಸ್ವಾಗತಿಸಿದರು. ಡಾ.ಶೃತಿ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ಊರ್ವಶಿ ಶೆಟ್ಟಿ ವಂದಿಸಿದರು.







