ಕೆ .ಎಸ್. ರಾವ್ ನಗರ ಮೊಬೈಲ್ ಟವರ್ ವಿರುದ್ದ ಬೃಹತ್ ಪ್ರತಿಭಟನೆ
.jpg)
ಮುಲ್ಕಿ, ಮಾ.21: ಇಲ್ಲಿನ ಕೆ. ಎಸ್.ರಾವ್ ನಗರದಲ್ಲಿರುವ ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಪ್ರದೇಶದ ಸಮೀಪದಲ್ಲಿ ಜಯ ಎಂಬವರ ಖಾಸಗಿ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಕಿಲ್ಪಾಡಿ ಪಂಚಾಯತ್ ಅನುಮತಿ ನೀಡಿದ್ದನ್ನು ವಿರೋಧಿಸಿ ಕೆಎಸ್ ರಾವ್ ನಗರದ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿ ಕಿಲ್ಪಾಡಿ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಎಸ್‌ರಾವ್ ನಗರದ ನಿವಾಸಿ, ಮೂಲ್ಕಿ ನಗರ ಪಂಚಾಯತ್ ಸದಸ್ಯ ಬಿ.ಎಂ. ಆಸೀಪ್ ಮಾತನಾಡಿ, ಮೊಬೈಲ್ ಟವರ್ ನಿರ್ಮಾಣದಿಂದ ಬರುವ ತರಂಗಾಂತರಗಳಿಂದ ಸ್ಥಳೀಯರ ಆರೋಗ್ಯದ ಮೇಲೆ ಸಮಸ್ಯೆಯಾಗಲಿದೆ. ಕೆ ಎಸ್ ರಾವ್ ನಗರ ಜನ ನಿಬಿಡ ಪ್ರದೇಶವಾಗಿದ್ದು ಇಲ್ಲಿ ಶಾಲೆ ,ಅಂಗನವಾಡಿ ಸೇರಿದಂತೆ ಹೆಚ್ಚಿನ ವಾಸದ ಮನೆಗಳಿದ್ದು ಮಕ್ಕಳಿಗೆ ಮತ್ತು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹಿಂದೆ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ನ ನಿರ್ಮಾಣವಾಗುವ ಸಂದರ್ದಲ್ಲಿ ವಿರೋಧ ವ್ಯಕ್ತವಾದ ಕಾರಣ ನಿರ್ಮಾಣ ಕೈಬಿಡಲಾಗಿತ್ತು. ದೌರ್ಬಾಗ್ಯವೆಂದರೆ ಅಂದು ಮೂಲ್ಕಿ ನ.ಪಂ. ವ್ಯಾಪ್ತಿಯಲ್ಲಿ ಮೊಬೈಲ್ ಟವರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶ್ರೀಮತಿ ಜಯರವರು ಇದೀಗ ತಮ್ಮ ಜಾಗದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಟವರ್ ನಿರ್ಮಾಣ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವು ಎಂದು ಆಸೀಫ್ ಎಚ್ಚರಿಕೆ ನೀಡಿದರು.
ಅಧ್ಯಕ್ಷ-ಕಾರ್ಯದರ್ಶಿ ಜೊತೆ ಮಾತಿನ ಚಕಮಕಿ
ಪ್ರತಿಟನಾಕಾರರು ಕಿಲ್ಪಾಡಿ ಪಂಚಾಯತಿ ಎದುರು ಮನವಿ ನೀಡಲೆಂದು ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರನ್ನು ಸುಮಾರು ಕಾದರೂ ಮನವಿ ಸ್ವೀಕರಿಸಲು ತಡವಾಗಿ ಬಂದದ್ದು ಪ್ರತಿಟನಾಕಾರರ ಆಕ್ರೋಶಕ್ಕೆ ಕಾರಣವಾಗಿ ಸ್ಥಳೀಯರಾದ ಧನಂಜಯ ಅಂಚನ್ ಹಾಗೂ ಅಧ್ಯಕ್ಷ ಕಾರ್ಯದರ್ಶಿ ಜೊತೆ ಮಾತಿನ ಚಕಮಕಿ ನಡೆಯಿತು.ಸ್ಥಳೀಯರಾದ ಧನಂಜಯ ಅಂಚನ್ ಮಾತನಾಡಿ ಕಿಲ್ಪಾಡಿ ಪಂಚಾಯತ್ ಸ್ಥಳೀಯರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೆ ಮೊಬೈಲ್ ಟವರಿಗೆ ಅನುಮತಿ ನೀಡಿದೆ. ಟವರ್ ನಿರ್ಮಾಣದಿಂದ ಸ್ಥಳೀಯ ವಸತಿ ಪ್ರದೇಶದ ಮೇಲೆ ಹೆಚ್ಚಿನ ಸಮಸ್ಯೆಯಾಗುವುದರಿಂದ ಕೂಡಲೇ ಟವರ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಕಿಲ್ಪಾಡಿ ಪಂಚಾಯತ್ ಕಚೇರಿ ಆವರಣದಲ್ಲಿ ಕಿಲ್ಪಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.ಮೂಲ್ಕಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗುಬಂದೋಬಸ್ತು ನಡೆಸಿದ್ದರು.







