ಐಪಿಎಲ್‌ಗೆ ಆಲ್‌ರೌಂಡರ್ ಜೆ.ಪಿ. ಡುಮಿನಿ ಅಲಭ್ಯ

ಹೊಸದಿಲ್ಲಿ, ಮಾ.21: ವೈಯಕ್ತಿಕ ಕಾರಣದಿಂದಾಗಿ ದಕ್ಷಿಣ ಆಫ್ರಿಕ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಲ್‌ರೌಂಡರ್ ಜೆ.ಪಿ. ಡುಮಿನಿ 10ನೆ ಆವೃತ್ತಿಯ ಐಪಿಎಲ್‌ನಿಂದ ದೂರ ಉಳಿದಿದ್ದಾರೆ.
ಟೂರ್ನಿ ಆರಂಭವಾಗಲು 16 ದಿನಗಳು ಬಾಕಿ ಇರುವಾಗ ಡುಮಿನಿ ತನ್ನ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದಾರೆ. ಫ್ರಾಂಚೈಸಿ ಡುಮಿನಿ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ.
ಡುಮಿನಿ ಹಾಗೂ ಡೆಲ್ಲಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಕಾರಣವೆಂದು ಸ್ಪಷ್ಟಪಡಿಸಿಲ್ಲ. ಡುಮಿನಿ ಮುಂಬರುವ ಏಕದಿನ ಸರಣಿ, ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು 10 ದಿನಗಳಿರುವಾಗ ಐಪಿಎಲ್ ಕೊನೆಗೊಳ್ಳಲಿದೆ.
‘‘ಇದು ನನ್ನ ಪಾಲಿಗೆ ಅತ್ಯಂತ ಕಠಿಣ ನಿರ್ಧಾರ. ಆದರೆ ಇದೊಂದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರವಾಗಿದೆ. ಭವಿಷ್ಯದಲ್ಲಿ ದಿಲ್ಲಿ ತಂಡದ ಪರ ಮತ್ತೊಮ್ಮೆ ಆಡುವ ವಿಶ್ವಾಸದಲ್ಲಿದ್ದೇನೆ’’ ಎಂದು ಡುಮಿನಿ ಹೇಳಿದ್ದಾರೆ.
ಡೆಲ್ಲಿಯ ಪರ 38 ಪಂದ್ಯಗಳಲ್ಲಿ 1015 ರನ್ ಗಳಿಸಿರುವ ಡುಮಿನಿ ತಂಡದ ಐದನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಕಳೆದ ಋತುವಿನಲ್ಲಿ 2 ಪಂದ್ಯಗಳಲ್ಲಿ ಡೆಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದರು.





