ಸಿಡಿಮದ್ದು ಸ್ಫೋಟ ಪ್ರಕರಣ : ಮಾಲಕನ ವಿರುದ್ದ ದೂರು ದಾಖಲು
ಬಂಟ್ವಾಳ, ಮಾ. 21: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಬೆಟ್ಟುವಿನ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸೋಮವಾರ ಸಂಜೆ ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟಿಸಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಘಟಕದ ಮಾಲಕ ಅಬ್ದುಲ್ ಶುಕೂರು ಎಂಬವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಶುಕೂರು ಸಿಡಿಮದ್ದು ಘಟಕದ ಸ್ಥಾಪಕ ಗರ್ನಾಲ್ ಸಾಹೇಬರೆಂದೇ ಚಿರಪರಿಚಿತರಾಗಿದ್ದ ದಿ. ಇಬ್ರಾಹೀಂ ಸಾಹೇಬರ ಮಗನಾಗಿದ್ದು ಪ್ರಸ್ತುತ ಅವರು ವಿದೇಶದಲ್ಲಿದ್ದಾರೆ. ಅವರ ಮೇಲೆ ಐಪಿಸಿ ಕಲಂ 286, 304 (ಉದ್ದೇಶ ಪೂರ್ವಕವಲ್ಲದ ಮಾನವ ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಿಡಿಮದ್ದು ತಯಾರಿಕಾ ಘಟಕಕ್ಕೆ ಪರವಾನಿಗೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಾಂಗ ಪತ್ತೆ: ಸಿಡಿಮದ್ದು ಸ್ಫೋಟಗೊಂಡ ಘಟಕದ ಸುತ್ತಮುತ್ತ ಸೋಮವಾರ ತಡರಾತ್ರಿವರೆಗೆ ಹಾಗೂ ಮಂಗಳವಾರ ಬೆಳಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮೂರು ಬೆರಳು, ಒಂದು ಪಾದ, ಒಂದು ಕೈ ಮತ್ತು ಕಾಲಿನ ಗಂಟು ಭಾಗಗಳು ಪತ್ತೆಯಾಗಿದ್ದು ಅವುಗಳೆಲ್ಲಾ ಮೃತ ಸುಂದರ ಪೂಜಾರಿಯದ್ದು ಎಂದು ತಿಳಿದುಬಂದಿದೆ. ಸುಂದರ ಪೂಜಾರಿ ಮತ್ತು ಅಬ್ದುಲ್ ಅಝೀಂರವರ ಶವಪರೀಕ್ಷೆ ನಡೆಸಿ ಇಂದು ಸಂಜೆ ಕುಟುಂಬಕ್ಕೆ ಬಿಟ್ಟುಕೊಡಲಾಗಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿ ಹರಿಶೇಖರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಎಡಿಶನಲ್ ಎಸ್ಪಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್., ವೃತ್ತ ನಿರೀಕ್ಷಕ ಮಂಜಯ್ಯ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಘಟನಾ ಸ್ಥಳಕ್ಕೆ ಮಂಗಳವಾರ ಕೂಡಾ ನೂರಾರು ಮಂದಿ ಆಗಮಿಸಿ ವೀಕ್ಷಿಸುತ್ತಿದ್ದ ದೃಶ್ಯ ಕಂಡು ಬಂತು.







