Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮುಟ್ಟಿದರೆ ಜಾರುವ ನುಣುಪಾದ ಸೀರೆ

ಮುಟ್ಟಿದರೆ ಜಾರುವ ನುಣುಪಾದ ಸೀರೆ

ಚಂದ್ರಕಲಾ ನಂದಾವರಚಂದ್ರಕಲಾ ನಂದಾವರ22 March 2017 12:31 AM IST
share
ಮುಟ್ಟಿದರೆ ಜಾರುವ ನುಣುಪಾದ ಸೀರೆ

ಹೀಗೆ ನಾನು ಗಣಪತಿ ಜೂನಿಯರ್ ಕಾಲೇಜಿಗೆ 1973ರ ಜೂನ್‌ನಲ್ಲಿ ಕನ್ನಡ ಹಾಗೂ ಹಿಂದಿ ಉಪನ್ಯಾಸಕಳಾಗಿ ಸೇರಿದೆ. ಇಷ್ಟು ಹೊತ್ತಿಗೆ ನನ್ನ ಕವನಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದು. ಅದೇ ವರ್ಷದ ಜುಲೈ ತಿಂಗಳಲ್ಲಿ ನನ್ನ ಸಣ್ಣ ಹೊತ್ತಗೆಯೊಂದು ಮಂಗಳಗಂಗೋತ್ರಿಯ ನಮ್ಮ ಕನ್ನಡ ವಿಭಾಗದ ಮಂಗಳ ಮಾಲೆಯ ಕೃತಿಯಾಗಿ ಬಿಡುಗಡೆಯಾಗಲಿತ್ತು. ಪ್ರೊ.ಎಸ್.ವಿ. ಪರಮೇಶ್ವರ ಭಟ್ಟರು ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ನೇಮಕಗೊಂಡರು.

ಈ ಕಾರಣದಿಂದ ಭಾರತೀಯ ವಿದ್ಯಾಭವನದ ಕಾರ್ಯಕ್ರಮಗಳಲ್ಲಿ ಭಾವಗೀತೆ, ಗಮಕವಾಚನ, ಕಾರ್ಯಕ್ರಮ ನಿರೂಪಕಿಯಾಗಿ ವೇದಿಕೆ ಹತ್ತುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರೊಂದಿಗೆ ಪತ್ರಿಕಾ ವರದಿಯಲ್ಲಿ ಗಣಪತಿ ಜೂನಿಯರ್ ಕಾಲೇಜಿನ ಉಪನ್ಯಾಸಕಿ ಎಂಬ ಗುರುತಿಸುವಿಕೆಯಿಂದಲೂ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿಕ ಬಾಧ್ಯತೆ ಉಂಟಾಯಿತು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿ ಬಂಧುಗಳು, ಪ್ರಾಂಶುಪಾಲರು ಸಂತಸ ಪಡುವ ಮೂಲಕ ಗಣಪತಿ ಜೂನಿಯರ್ ಕಾಲೇಜಿನ ವಾತಾವರಣ ಇಷ್ಟವಾಯಿತು. ಇದೀಗ ಉರ್ವಸ್ಟೋರಿನ ಬಸ್‌ಸ್ಟಾಂಡಲ್ಲಿ ಸರಕಾರಿ ಕಾಲೇಜಿನ, ಬಿಎಡ್. ಕಾಲೇಜಿನ ಉಪನ್ಯಾಸಕ, ಪ್ರಾಧ್ಯಾಪಕರೊಂದಿಗೆ ನಾನೂ ಒಬ್ಬ ಉಪನ್ಯಾಸಕಿಯಾಗಿ ಸೇರಿಕೊಂಡುದು ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಉರ್ವಸ್ಟೋರ್ಸ್‌, ಕೊಟ್ಟಾರ, ದೇರೆಬೈಲು, ಚಿಲಿಂಬಿ ಹಾಗೂ ಸರಕಾರಿ ವಸತಿಗೃಹಗಳಿಂದ, ನನ್ನ ಮನೆಯ ಆಸುಪಾಸಿನ ಮನೆಗಳಿಂದ ಗಂಡು ಹೆಣ್ಣು ಮಕ್ಕಳು ನನ್ನ ಕಾಲೇಜಿಗೆ ವಿದ್ಯಾರ್ಥಿಗಳಾಗಿ ಬರುತ್ತಿದ್ದರು. ಬಜಪೆಯಲ್ಲಿ ಗಂಡು ಮಕ್ಕಳನ್ನು ಆಳಲು ಸಾಧ್ಯವಿಲ್ಲ ಎಂದು ಹೆಣ್ಣು ಮಕ್ಕಳ ಶಾಲೆಗೆ ಸೇರಿದ ಅನುಭವ ನೆನಪಲ್ಲಿ ಇತ್ತು.

ಈಗ ಈ ಕಾಲೇಜಿನಲ್ಲಿ ನಾನು ಇರುವುದು ಸಾಧ್ಯವಿಲ್ಲ ಎಂದಾದರೆ ನನ್ನಿಂದ ಉಪನ್ಯಾಸಕ ವೃತ್ತಿಯೇ ಸಾಧ್ಯವಾಗದು ಎಂದು ಕೂಡಾ ತಿಳಿದಿತ್ತು. ಆದ್ದರಿಂದ ನನ್ನೊಳಗಿನ ಧೈರ್ಯವನ್ನು ಎಚ್ಚರಿಸಿಕೊಂಡಿದ್ದೆ. ಇದಕ್ಕೆ ಕಾರಣವಿತ್ತು 1966ರಿಂದ ಹೈಸ್ಕೂಲುಗಳಲ್ಲಿ 11ನೆ ತರಗತಿ ಎಂಬ ಹೆಸರಲ್ಲಿ ಕಾಲೇಜಿನಲ್ಲಿ ಅದುವರೆಗೆ ಇದ್ದ ಇಂಟರ್ ಮೀಡಿಯೇಟ್ ತರಗತಿಗಳು ಪ್ರಾರಂಭವಾಗಿದ್ದು, ಅದು 1972ರ ವೇಳೆಗೆ ಎರಡು ವರ್ಷದ ಪದವಿಪೂರ್ವ ತರಗತಿಗಳೆಂದು ಬದಲಾಯಿತು. ಜತೆಗೆ 11ನೆ ತರಗತಿಗಳನ್ನು ನಡೆಸುತ್ತಿದ್ದ ಹೈಸ್ಕೂಲುಗಳೆಲ್ಲ ಪ್ರತ್ಯೇಕವಾಗಿ ಜೂನಿಯರ್ ಕಾಲೇಜುಗಳೆಂದು ಗುರುತಿಸಿಕೊಳ್ಳಬೇಕಾದ ಆದೇಶ ಅಂದಿನ ವಿದ್ಯಾಮಂತ್ರಿ ಬದರೀನಾರಾಯಣರ ಆದೇಶವಾಗಿತ್ತು. ಈ ಕಾರಣದಿಂದ ಹೊಸ ಕಾಲೇಜಿನ ಪ್ರಾರಂಭದಲ್ಲಿ ಅಂಕಗಳ ವಿಶೇಷ ಅರ್ಹತೆಗಳನ್ನೆಲ್ಲಾ ಬದಿಗಿರಿಸಿ, ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯನ್ನು ಕಂತು ಕಂತಾಗಿ ಮುಗಿಸಿದ, ಈಗಾಗಲೇ ಕೆಲಸಕ್ಕೆ ಸೇರಿಕೊಂಡಿದ್ದ ಹಲವು ವಿದ್ಯಾರ್ಥಿಗಳಿಗೆ ಗಣಪತಿ ಜೂನಿಯರ್ ಕಾಲೇಜು ಅವಕಾಶ ನೀಡಿತ್ತು. ನನ್ನ ತರಗತಿಯೊಳಗೆ ನನ್ನಷ್ಟು ವಯಸ್ಸಿನ ಮಾತ್ರವಲ್ಲ ನನಗಿಂತ ಹೆಚ್ಚು ವಯಸ್ಸಿನ ಹುಡುಗರು ಇದ್ದುದು ನನ್ನ ಅಧ್ಯಾಪನ ವೃತ್ತಿಗೆ ಸವಾಲೇ ಆಗಿತ್ತು. ಈ ಸವಾಲು ನನ್ನ ಜೀವನದ ಸವಾಲು ಕೂಡಾ ಆಗಿದ್ದುದರಿಂದ ಇದನ್ನು ಎದುರಿಸಲು ನಾನು ಧೈರ್ಯಸ್ಥೆಯಾಗಲೇಬೇಕಿತ್ತು, ಆದೆ ಎನ್ನುವುದು ಈಗ ಇತಿಹಾಸ.

    ಒಟ್ಟು ಸಮಾಜದಲ್ಲಿಯೂ ಈ ಜೂನಿಯರ್ ಕಾಲೇಜುಗಳು ಸಮಾಜದ ಶಿಕ್ಷಣಕ್ಕೆ ಪೂರಕವಾಯಿತು ಎಂದರೆ ತಪ್ಪಲ್ಲ. ಎಸೆಸೆಲ್ಸಿ ಮುಗಿಸಿ ಮನೆಯಲ್ಲೇ ಉಳಿಯಬೇಕಾಗುತ್ತಿದ್ದ ಹೆಣ್ಣು ಮಕ್ಕಳು ಅವರದೇ ಆದ ಕ್ಯಾಂಪಸಲ್ಲಿ ಅಥವಾ ಅವರು ಕಲಿತ ಶಾಲೆಯ ಆಡಳಿತ ಮಂಡಳಿಯದ್ದೇ ಆದ ಕಾಲೇಜಲ್ಲಿ ಸೇರುವುದಕ್ಕೆ ಹೆತ್ತವರ ಅಡ್ಡಿ ಆತಂಕಗಳು ಕಡಿಮೆಯಾಯಿತು. ಎಸೆಸೆಲ್ಸಿ ಓದಿನ ಬಳಿಕ ಐಟಿಐಗೆ ಹೋಗುವ ಗಂಡು ಮಕ್ಕಳೂ ಕೂಡಾ ಪಿಯುಸಿ ಮಾಡಿ ಐಟಿಐಗೆ ಮಾತ್ರವಲ್ಲ ಹಲವರು ಇಂಜಿನಿಯರಿಂಗ್ ಡಿಪ್ಲೊಮಾ ಮಾಡುವುದಕ್ಕೆ ಅವಕಾಶವಾಯ್ತು. ಹಾಗೆಯೇ ಹೈಸ್ಕೂಲು ತರಗತಿಗಳಲ್ಲಿ ಹುಡುಗಾಟವಾಡುತ್ತಿದ್ದ ವಿದ್ಯಾರ್ಥಿಗಳು ಈಗ ಹದಿಹರೆಯದ ವಯಸ್ಸಿನ ಬದಲಾವಣೆಯೊಂದಿಗೆ ಜವಾಬ್ದಾರಿಯುಳ್ಳ ವಿದ್ಯಾರ್ಥಿಗಳಾಗಿ ಪಿಯುಸಿ ಮಾತ್ರವಲ್ಲ ಮುಂದೆ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡುವುದ್ಕೂಅವಕಾಶ ಲಭಿಸಿತು. ಇನ್ನೂ ಕೆಲವರು ಹೈಸ್ಕೂಲಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೂ, ಕಾಲೇಜಿನ ಸ್ವಾತಂತ್ರದ ವಾತಾವರಣದಿಂದ ವಿದ್ಯಾಭ್ಯಾಸಕ್ಕೆ ಕೊನೆ ಹಾಡಿದವರೂ ಇಲ್ಲವೆಂದಲ್ಲ.

ಹಾಗೆಯೇ ಹದಿಹರೆಯದ ಆ ವಯಸ್ಸು ಪ್ರೀತಿ, ಪ್ರೇಮ, ಕಾಮಗಳ ವ್ಯತ್ಯಾಸ ತಿಳಿಯದೆ ಬದುಕನ್ನು ದುರಂತಕ್ಕೆ ಒಡ್ಡಿದ್ದೂ ಇದೆ. ಹೀಗೆ ಪಿಯುಸಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಮಾದರಿ ಇಲ್ಲದೆ ಉಪನ್ಯಾಸಕರೇ ಅವರಿಗೆ ಮಾದರಿಯಾಗಬೇಕಾಗಿದ್ದ ಸಂಕ್ರಮಣ ಕಾಲದಲ್ಲಿ ನಾನು ಉಪನ್ಯಾಸಕಿಯಾಗಿದ್ದೆ. ಒಂದಂತೂ ನಿಜ ನಾನು ಕನ್ನಡ ಮತ್ತು ಹಿಂದಿ ಸಾಹಿತ್ಯಗಳ ಪಾಠಮಾಡಿದ್ದೆ. ಸಾಹಿತ್ಯ ಎಂದರೆ ಅದು ಬದುಕಿನ ಕುರಿತಾದುದೇ ಆಗಿರುತ್ತದೆ. ಆದ್ದರಿಂದ ಬದುಕಿಗಾಗಿ ಪಾಠಮಾಡಿದೆ. ನನ್ನ ಬದುಕಿಗಾಗಿ ಮತ್ತು ನನ್ನ ವಿದ್ಯಾರ್ಥಿಗಳ ಬದುಕಿನ ಭವಿಷ್ಯಕ್ಕಾಗಿ. ಅರಿತು ಬದುಕಿನದವರು ಹಲವರಾದರೆ ಅರಿಯದೆ ಉತ್ತಮ ಬದುಕು ಕಳಕೊಂಡವರು ಕೆಲವರು; ಇನ್ನು ಕೆಲವರು ಮುಂದಿನ ಬದುಕಿನಲ್ಲಿ ತಮ್ಮನ್ನು ತಾವು ತಿದ್ದಿಕೊಂಡು ಬದುಕಿದವರೂ ಇದ್ದಾರೆ. ನಾನು ಅವರಿಗೆ ಪಾಠ ಮಾಡಿದಂತೆಯೇ ನನ್ನ ಮೂವತ್ತೇಳುವರೆ ವರ್ಷಗಳ ಅಧ್ಯಾಪನದಲ್ಲಿ ನನ್ನ ವಿದ್ಯಾರ್ಥಿಗಳು ನನಗೆ ಲೋಕ ಜೀವನದ ಸಾಕಷ್ಟು ಪಾಠಗಳನ್ನು ಕಲಿಸಿದ್ದಾರೆ. ಅವರ ಕಾರಣದಿಂದಲೇ ನನ್ನ ಅಧ್ಯಾಪನ ವೃತ್ತಿ ಯಶಸ್ಸು ಕಂಡಿದೆ ಎಂದು ತಿಳಿದಿದ್ದೇನೆ. ವಿವಿಧ ಜಾತಿ, ಧರ್ಮಗಳ ವಿವಿಧ ವರ್ಗಗಳ, ಹಳ್ಳಿ, ಪೇಟೆಗಳ, ಗಂಡು ಹೆಣ್ಣು ಮಕ್ಕಳ ಮೂಲಕ ಸಮಾಜವನ್ನು ಗ್ರಹಿಸುವ ನೋಟ ಒಂದು ನನಗೆ ದೊರೆಯಿತು. ಆ ಒಳ ನೋಟದಿಂದಲೇ ಇತರರ ಮಾತುಗಳಿಗಿಂತ ನನ್ನ ಜೀವನಾನುಭವಗಳ ಸತ್ಯವೇ ಸತ್ಯವೆಂದು ತಿಳಿಯುವಂತಾಯ್ತು ಎನ್ನುವುದು ನನ್ನ ಬದುಕಿಗೆ ದೊರೆತ ದೊಡ್ಡ ಭಾಗ್ಯ. 70ರ ದಶಕದ ಪ್ರಾರಂಭದಲ್ಲಿ ವಿದೇಶೀ ವಸ್ತುಗಳು ಕಳ್ಳ ಸಾಗಣೆಯ ಮೂಲಕ ಆಮದಾಗುತ್ತಿತ್ತು ಎಂದು ಸುದ್ದಿ ಹರಡಿತ್ತ್ತು.

ಈಗಿನಂತೆ ಚಿನ್ನದ ಬಿಸ್ಕತ್ತುಗಳಲ್ಲ. ಸೀರೆ, ಪ್ಯಾಂಟ್, ಶರ್ಟು ಪೀಸುಗಳು, ವಾಚ್ ಹಾಗೂ ಪರಿಮಳ ದ್ರವ್ಯಗಳು ಮುಖ್ಯವಾಗಿದ್ದುವು. ಇದು ಮುಖ್ಯವಾಗಿ ಕೊಲ್ಲಿ ರಾಷ್ಟ್ರದಿಂದ ಅದರಲ್ಲೂ ಕುವೈತ್‌ನಿಂದ. ನಮ್ಮ ಜಿಲ್ಲೆಯಿಂದ ಕುವೈತ್‌ಗೆ ಕೆಲಸಕ್ಕಾಗಿ ಹೋದವರಲ್ಲಿ ಮೊದಲಿಗರೆಂದರೆ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು. ಯುವಕರು ಉದ್ಯೋಗಕ್ಕಾಗಿ ಹೋಗುತ್ತಿದ್ದು, ಮದುವೆಯಾದ ಬಳಿಕ ಅವರ ಹೆಂಡತಿಯರನ್ನೂ ಕರೆದೊಯ್ಯಲು ಅವಕಾಶವಿರುತ್ತಿತ್ತು. ಆದರೆ ಮಹಿಳೆಯರು ಅಲ್ಲಿ ಉದ್ಯೋಗ ಮಾಡಲು ಅವಕಾಶವಿದ್ದವರು ಮಾತ್ರ ಹೋಗುತ್ತಿದ್ದರು. ಮಹಿಳೆಯರು ಮಾಡಬಹುದಾಗಿದ್ದ ಕೆಲಸಗಳಲ್ಲಿ ಮುಖ್ಯವಾದುದು ಅಧ್ಯಾಪಿಕೆಯರು ಮತ್ತು ದಾದಿ ವೃತ್ತಿ. ಆದ್ದರಿಂದ ಈ ಅವಕಾಶವು ಕೂಡಾ ಕ್ರಿಶ್ಚಿಯನ್ ಮಹಿಳೆಯರಿಗೆ ದೊರೆತಂತೆ ಮುಸ್ಲಿಂ ಮಹಿಳೆಯರಿಗೆ ದೊರೆತಿರಲಿಲ್ಲ. ಅವರೆಲ್ಲ ಊರಲ್ಲೇ ಉಳಿಯಬೇಕಾಗುತ್ತಿತ್ತು. ನನ್ನ ವಿದ್ಯಾರ್ಥಿಗಳಲ್ಲಿ ಅನೇಕರು ಕೊಲ್ಲಿ ರಾಷ್ಟ್ರಗಳಿಗೆ ಹೋದವರೂ ಇದ್ದಾರೆ. ಕಾಪಿಕಾಡಿನಲ್ಲಿ ಕೆಲವು ಮನೆಯ ಗಂಡಸರು ಕುವೈತ್‌ನಲ್ಲಿದ್ದುದೂ ಇತ್ತು. ಲೂಸಿಬಾಯಿಯ ಗಂಡ ನನಗೆ ಉಡುಗೊರೆಯಾಗಿ ನೀಡಿದ ವಾಚ್ ಅಲ್ಲಿಂದಲೇ ತಂದುದಾಗಿತ್ತಲ್ಲವೇ? ಮುಂದೆ ಅವರ ಮಕ್ಕಳೂ ಅಗತ್ಯವಾಗಿರುವಷ್ಟು ವಿದ್ಯಾಭ್ಯಾಸ ಪಡೆದುಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಹೋಗುವುದು ಸಹಜವೇ ಆಗಿತ್ತು. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೂ ಪಿಯುಸಿ ಮುಗಿಸಿಕೊಂಡು ಕುವೈಟ್‌ಗೆ ಹೋಗುವ ಕನಸೇ ಮೊದಲಿನದಾಗಿತ್ತು.

ಆಗೆಲ್ಲಾ ಜಾತಿ, ಧರ್ಮ ಭೇದಗಳಿಲ್ಲದ ದಿನಗಳಾದುದರಿಂದ ಸ್ನೇಹಿತರು ಪರಸ್ಪರ ಒಬ್ಬರಿಗೊಬ್ಬರು ನೆರವು ನೀಡಿ ಇಂತಹ ಅವಕಾಶಗಳನ್ನು ಒದಗಿಸಿದವರೂ ಇದ್ದಾರೆ. ಉರ್ವಸ್ಟೋರ್ ಮನೆಯ ಆಸುಪಾಸಿನಲ್ಲಿಯೂ ಹೀಗೆ ವಿದೇಶಗಳಲ್ಲಿದ್ದವರು ಹೆಚ್ಚಾಗಿ ಕ್ರಿಶ್ಚಿಯನ್ನರು. ಊರಿಗೆ ಬಂದಾಗ ಅವರ ಮನೆ ದುರಸ್ತಿ, ಇಲ್ಲವೇ ಹೊಸ ಮನೆ ಹಿತ್ತಲು ಖರೀದಿ, ಇವುಗಳನ್ನು ಮಾಡುತ್ತಿದ್ದರಿಂದ ಅಂದಿನ ಎಳೆಯ ಪೀಳಿಗೆಗೆ ವಿದೇಶವೆಂದರೆ ಕೊಲ್ಲಿ ರಾಷ್ಟ್ರಗಳು ಉದ್ಯೋಗಾವಕಾಶದ ನೆಲೆಗಳಾಗಲು ಪ್ರಾರಂಭಿಸಿದ ದಿನಗಳು. ನಮ್ಮ ಧಣಿಮಾಯಿಯವರ ಎರಡನೆ ಮಗಳು ಸಂಸಾರ ಸಮೇತರಾಗಿ ಕುವೈಟ್‌ನಲ್ಲಿದ್ದರು. ನಾನು ಎಂ.ಎ. ಓದುತ್ತಿದ್ದಾಗ ಒಮ್ಮೆ ಗಂಡ ಮಕ್ಕಳೊಂದಿಗೆ ಬಂದು ಹೋಗಿದ್ದರು. ಆಗ ಅವರು ಕೆಲವು ಸೀರೆಗಳನ್ನು ತಂದು ಮಾಯಿಯ ಮೂಲಕ ಕೆಲವರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದಿತ್ತು. ನಾವಂತೂ ಅಂತಹ ಸೀರೆ ಕೊಳ್ಳುವುದರ ಕನಸು ಕಾಣಲೂ ಸಾಧ್ಯವಿಲ್ಲದ ದಿನಗಳು. ನೋಡಲು ಕೂಡ ಹೋಗಿಲ್ಲ. ಇದೀಗ ನಾನು ಉಪನ್ಯಾಸಕಿಯಾದ ಮೇಲೆ ಮತ್ತೆ ಬರುವವರಿದ್ದರು. ಧಣಿಮಾಯಿ ಮೊದಲೇ ಆ ವಿಚಾರ ಹೇಳಿ ‘‘ನಿಮಗೆ ಸೀರೆ ಬೇಕಿದ್ದರೆ ಹೇಳಿ ತಂದಾಳು’’ ಎಂದು ನಮ್ಮಲ್ಲಿ ತಿಳಿಸಿದರು. ಈಗಾಗಲೇ ಧಣಿ ಮಾಯಿಯ ಬಾಕಿಯಾದ ಬಾಡಿಗೆಯನ್ನು ಪ್ರತೀ ತಿಂಗಳು ಹೆಚ್ಚುವರಿಯಾಗಿ ಕೊಟ್ಟು ಮುಗಿದಿತ್ತು. ಸೀರೆಯ ಹಣ ಒಮ್ಮೆಗೆ ಕೊಡಬೇಕಾಗಿಲ್ಲ, ತಿಂಗಳಿಗೆ ಸ್ವಲ್ಪ ಕೊಡಿ ಎಂದು ಆಸೆ ಹುಟ್ಟಿಸಿದರು.

ಚಿನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲದ ನನಗೆ ಆ ಬಗೆಗಿನ ಕನಸು ಕೂಡಾ ಬೀಳುತ್ತಿರಲಿಲ್ಲ. ಆದರೆ ಸೀರೆ ಹಾಗಲ್ಲ ಉಪನ್ಯಾಸಕಿಯಾಗಿ ಕಾಲೇಜಿನ ಹುಡುಗ, ಹುಡುಗಿಯರ ಮುಂದೆ ನಿಲ್ಲಬೇಕಾದವಳು. ಉಡುಗೆ ಕೂಡಾ ವ್ಯಕ್ತಿತ್ವದ ಒಂದು ಭಾಗ ಎನ್ನುವುದು ಇದೀಗ ಅರ್ಥವಾಗಿತ್ತು. ನಾನಾದರೋ ಅಮ್ಮನ ಕೈಮಗ್ಗದ ಸೀರೆಗಳನ್ನೇ ಉಡುತ್ತಿದ್ದೆ. ವಿದ್ಯಾರ್ಥಿ ದೆಸೆಯಲ್ಲೇ ಅದು ಅಭ್ಯಾಸವಾದುದರಿಂದ ಸಂಕೋಚವೇನೂ ಇರಲಿಲ್ಲ.ಆದರೆ ಕಾಲೇಜಿನಲ್ಲಿ ತುಂಟ ಹುಡುಗರು ‘‘ಸೌರಾಷ್ಟ್ರ ಕ್ಲಾತ್ ಸ್ಟೋರಲ್ಲಿ ಹ್ಯಾಂಡ್ ಲೂಮ್ ಸೀರೆಗಳ ಹೊಸ ಸ್ಟಾಕ್ ಬಂದಿದೆ’’ ಎಂದು ನನಗೆ ಕೇಳಿಸುವ ಹಾಗೆ ತಮಾಷೆ ಮಾಡುವುದು ಕಿವಿಗೆ ಬೀಳುತ್ತಿತ್ತು. ಅದನ್ನೆಲ್ಲಾ ಗಣಿಸುತ್ತಾ ಹೋದರೆ ಬದುಕಲು ಸಾಧ್ಯವಿಲ್ಲ ಎಂದು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡಲು ಕಲಿತಿದ್ದೆ. ಜತೆಗೆ ‘ಮುಸಬಾ’ ‘ಮೆಸರ್ಸ್’ ಜವುಳಿ ಅಂಗಡಿಗಳಿಗೆ ಸಂಬಂಧಿಗಳಾದ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದರು. ಇವರು ಬಂದು ಫಾರಿನ್ ಸೀರೆ ಇದೆ ತೆಗೊಳ್ಳಿ ಎಂದು ಒತ್ತಾಯಿಸುತ್ತಿದ್ದರು. ನನ್ನ ಸಹೋದ್ಯೋಗಿ ಪುರುಷರು ಅವರಿಂದ ವಾಚ್, ಪ್ಯಾಂಟ್ ಶರ್ಟ್‌ಪೀಸುಗಳನ್ನು ಖರೀದಿಸುತ್ತಿದ್ದುದನ್ನು ನೋಡಿದೆ. ಆದರೆ ನನಗೋ ಇಂತಹ ವ್ಯವಹಾರಗಳು ಗೊತ್ತಿಲ್ಲ. ಜೊತೆಗೆ ವಿದ್ಯಾರ್ಥಿಗಳ ಹತ್ತಿರ ಇಂತಹ ವ್ಯವಹಾರ ಬೇಡ ಅನ್ನಿಸುತ್ತಿತ್ತು. ಇದೀಗ ಧಣಿಮಾಯಿಯ ಮಗಳು ತರುತ್ತಾರೆ ಎಂದಾರೆ ಆದೀತು, ಆದರೆ ಒಮ್ಮೆಗೆ ಹಣಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದಾಯ್ತು.

ಅವರು ತುಂಬಾ ಸೀರೆ ತಂದಿದ್ದರು. ಹಾಗೆ ತರುವಾಗ ಅವರ ಸ್ವಂತಕ್ಕೆ ಎಂದೇ ತರಬೇಕು. ಆದ್ದರಿಂದ ಸೀರೆಗಳ ಬದಿಗಳನ್ನು ಹೊಲಿದು ತರುತ್ತಿದ್ದರು. ಇಲ್ಲವಾದರೆ ಅವು ಮಾರಾಟಕ್ಕೆ ತರುವಂತಹುದೆಂದು ಅದಕ್ಕೆ ಮಾರಾಟ ತೆರಿಗೆ ಹಾಕುತ್ತಿದ್ದರಂತೆ. ಅಂತೂ ಸೀರೆ ಬಂದುದಾಯ್ತು. ನೋಡಿದ್ದೂ ಆಯ್ತು ಮುಟ್ಟಿದರೆ ಜಾರುವ ನುಣುಪಾದ ಬಟ್ಟೆ, ಬಣ್ಣ ಹಾಗೂ ವಿನ್ಯಾಸಗಳು ಆಕರ್ಷಕವಾಗಿದ್ದುವು. ನನಗೊಬ್ಬಳಿಗೇ ಕೊಂಡರೆ ಸರಿಯಾಗಲಾರದೆಂದು ಅಮ್ಮನಿಗೆ, ತಂಗಿಗೂ ಸೇರಿದಂತೆ ಮೂರು ಸೀರೆಗಳನ್ನು ಕೊಂಡದ್ದಾಯಿತು. ಮಾತಿನಂತೆ ಧಣಿಮಾಯಿಗೆ ಸೀರೆಗಳ ದುಡ್ಡನ್ನು ತಿಂಗಳು ತಿಂಗಳಿಗೆ ಪಾವತಿಸುವಲ್ಲಿ ಶಿಸ್ತು ಇಟ್ಟುಕೊಂಡೆ. ಹೀಗೆ ನಾನೇ ಒಂದು ವ್ಯವಹಾರ ಮಾಡಲು ಕಲಿತೆ. ವ್ಯವಹಾರಲ್ಲಿ ಶಿಸ್ತು ಅತ್ಯಂತ ಮುಖ್ಯ ಎಂದು ಆಗಲೇ ತಿಳಿದುಕೊಂಡೆ.

‘‘ಸಾಲ ಮಾಡಿ ತುಪ್ಪ ತಿನ್ನು’’ ಎನ್ನುವ ಚಾರ್ವಾಕರ ಸಿದ್ಧಾಂತದಲ್ಲಿಯೂ ಸಾಲ ಬಾಕಿ ಮಾಡಿಕೊಂಡು ಮರ್ಯಾದೆ ಕಳೆದು ಕೋ ಎಂದು ಖಂಡಿತಾ ಹೇಳಿಲ್ಲ. ಈ ಶಿಸ್ತಿನಿಂದ ಮುಂದಿನ ಬಾರಿಯ ಧಣಿಮಾಯಿಯ ಮಗಳಿಂದ ಮತ್ತೆರಡು ಸೀರೆ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಯಿತು. ಮುಂದೆಯೂ ಆಕೆ ಬರುತ್ತಿದ್ದಾಗ ಸೀರೆಗಳನ್ನು ತರುತ್ತಿದ್ದರು. ಆದರೆ ನಾನು ಮದುವೆಯಾಗಿ ಗಂಡನ ಮನೆ ಸೇರಿದ್ದೆ. ಈಗ ಸೀರೆ ಕೊಳ್ಳುವುದು ಅಸಾಧ್ಯವಾಗಿತ್ತು. ಸಣ್ಣಮಟ್ಟಿನ ಕೂಡು ಕುಟುಂಬ ಹಾಗೂ ಜವಾಬ್ದಾರಿಗಳು ಹೆಚ್ಚಿದ್ದುವು. ಹಿಂದೆ ಸೀರೆ ಖರೀದಿಸುವಾಗಲೇ ದುಬಾರಿ ಎಂದು ಅಸಮಾಧಾನಪಟ್ಟುಕೊಂಡಿದ್ದ ಅಪ್ಪ ಮಾತ್ರ ‘‘ಈಗ ಯಾಕೆ ಸೀರೆ ಕೊಳ್ಳುವುದಿಲ್ಲ’’ ಎಂಬ ಪ್ರಶ್ನೆ ಕೇಳಿ ತನ್ನ ಅಸಮಾಧಾನವನ್ನು ಹೊರ ಹಾಕಿದರು.

share
ಚಂದ್ರಕಲಾ ನಂದಾವರ
ಚಂದ್ರಕಲಾ ನಂದಾವರ
Next Story
X