ಆದಾಯ ತೆರಿಗೆ ಪಾವತಿಸಲು ಆಧಾರ್ ಕಡ್ಡಾಯ ?
ಕಪ್ಪು ಹಣ ನಿಯಂತ್ರಣಕ್ಕೆ ಸರ್ಕಾರದಿಂದ 40 ಪ್ರಸ್ತಾಪಗಳು

ಹೊಸದಿಲ್ಲಿ, ಮಾ.22: ನಗದು ವ್ಯವಹಾರಗಳ ಮಿತಿಯನ್ನು ರೂ.2 ಲಕ್ಷಕ್ಕೆ ಎಪ್ರಿಲ್ 1ರಿಂದ ಜಾರಿಯಾಗುವಂತೆ ಕಡಿಮೆಗೊಳಿಸಿದ ಸರಕಾರ ಆದಾಯ ತೆರಿಗೆ ಪಾವತಿಸಲು ಆಧಾರ್ ಕಡ್ಡಾಯಗೊಳಿಸಿದೆ. ಅಲ್ಲದೆ ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಚುನಾವಣೆ ಸಂಬಂಧಿತ ದೇಣಿಗೆಗಳನ್ನು ಚೆಕ್ ಮುಖಾಂತರವೇ ಪಾವತಿಸಬೇಕೆಂದು ಹೇಳಿದೆ.
ಹಣಕಾಸು ಮಸೂದೆ 2017ಕ್ಕೆ ಒಟ್ಟು 40 ತಿದ್ದುಪಡಿಗಳನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದರೆ ಅದಕ್ಕೆ ಅವರು ವಿಪಕ್ಷಗಳಾದ ಆರ್ ಎಸ್ ಪಿ, ಟಿಎಂಸಿ ಹಾಗೂ ಬಿಜೆಡಿಯಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ಹೀಗೆ ಮಾಡುವ ಮೂಲಕ ಸರಕಾರ ತೆರಿಗೇತರ ಮಸೂದೆಗಳನ್ನು ಹಣಕಾಸು ಮಸೂದೆಯೊಂದಿಗೆ ಸೇರಿಸಿ ಅವುಗಳಿಗೆ ಸರಕಾರಕ್ಕೆ ಬಹುಮತವಿಲ್ಲದ ರಾಜ್ಯ ಸಭೆಯ ಅನುಮೋದನೆ ಅಗತ್ಯತೆಯಿಲ್ಲದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂತು.
ಫೆಬ್ರವರಿ 1ರಂದು ನಗದು ವ್ಯವಹಾರಗಳ ಮಿತಿಯನ್ನು ಸರಕಾರ ರೂ.3 ಲಕ್ಷಕ್ಕೆ ನಿಗದಿಪಡಿಸಿದ್ದರೆ ಈಗ ಅದನ್ನು ರೂ.2 ಲಕ್ಷಕ್ಕೆ ಇಳಿಸಿದೆ. ಈ ನಿಯಮ ಉಲ್ಲಂಘಿಸಿದವರು ತಾವು ನಡೆಸಿದ ನಗದು ವ್ಯವಹಾರದಷ್ಟೇ ಮೊತ್ತದ ದಂಡ ಪಾವತಿಸಬೇಕಾಗುವುದು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯ ಟ್ವೀಟ್ ಮಾಡಿದ್ದಾರೆ. ಈ ದಂಡವನ್ನು ನಗದು ಹಣ ಪಡೆದ ವ್ಯಕ್ತಿ ಯಾ ಸಂಸ್ಥೆ ಪಾವತಿಸಬೇಕಾಗಿದೆ.
ಜುಲೈ 1ರಿಂದ ಆದಾಯ ತೆರಿಗೆ ಪಾವತಿ ವೇಳೆ ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಲ್ಲದೆ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಲೂ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.
ಕಂಪೆನಿಗಳ ಕಾಯಿದೆ 2013ಕ್ಕೆ ಮಾಡಿದ ತಿದ್ದುಪಡಿಯಂತೆ ಇಲೆಕ್ಟೋರಲ್ ಟ್ರಸ್ಟಿಗಳಿಗೆ ನೀಡಲಾಗುವ ಹಣವನ್ನು ಅಕೌಂಟ್ ಪೇಯೀ ಚೆಕ್, ಬ್ಯಾಂಕ್ ಡ್ರಾಫ್ಟ್ ಅಥವಾ ಎಲೆಕ್ಟ್ರಾನಿಕ್ ಟ್ರಾನ್ಸ್ ಪರ್ ಮೂಲಕವೇ ಪಾವತಿಸಬೇಕಾಗಿದೆ. ಈ ಹಿಂದೆ ಚುನಾವಣಾ ಉದ್ದೇಶಗಳಿಗೆ ಮಾಡಲಾಗುವ ನಗದು ದೇಣಿಗೆಯ ಮಿತಿಯನ್ನು ರೂ. 20,000ಕ್ಕೆ ನಿಗದಿಪಡಿಸಲಾಗಿದ್ದರೆ ಈಗ ಅದನ್ನು ಚುನಾವಣಾ ಆಯೋಗದ ಶಿಫಾರಸಿನಂತೆ ರೂ.2,000ಕ್ಕೆ ನಿಗದಿಪಡಿಸಲಾಗಿದೆ.
ವಿವಿಧ ಟ್ರಿಬ್ಯುನಲ್ ಗಳಿಗೆ ಮಾಡಲಾದ ತಿದ್ದುಪಡಿಗಳು ಅವುಗಳಲ್ಲಿ ಸೇವೆ ಸಲ್ಲಿಸುವ ಸದಸ್ಯ ನ್ಯಾಯಾಧೀಶರುಗಳಿಗೆ ಸಮಾನ ಸೇವಾ ನಿಯಮಗಳನ್ನು ಹಾಗೂ ವೇತನವನ್ನು ಜಾರಿಗೊಳಿಸಲು ಅಗತ್ಯವಾಗಿದೆ ಎಂದು ಜೇಟ್ಲಿ ಹೇಳಿದರು.







