ಅಡ್ವಾಣಿ-ಜೋಶಿ ಕುರಿತ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ
ರಾಮಮಂದಿರ-ಬಾಬ್ರಿ ಮಸೀದಿ ವಿವಾದ

ಹೊಸದಿಲ್ಲಿ, ಮಾ.22: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ ಸಹಿತ ಬಿಜೆಪಿ ಹಾಗೂ ಸಂಘ ಪರಿವಾರ ಸಂಘಟನೆಯ ವಿರುದ್ಧ ಕ್ರಿಮಿನಲ್ ಸಂಚು ಪ್ರಕರಣವನ್ನು ಕೈಬಿಟ್ಟಿರುವ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಳೆದ ಬಾರಿ ನಡೆದ ವಿಚಾರಣೆಯ ವೇಳೆ ನಮ್ಮೆಂದಿಗಿದ್ದ ಜಸ್ಟಿಸ್ ಆರ್‌ಎಫ್ ನಾರಿಮನ್ ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಳ್ಳಲಾಗುವುದು ಎಂದು ಜಸ್ಟಿಸ್ ಪಿ.ಸಿ.ಘೋಷ್ ತಿಳಿಸಿದ್ದಾರೆ.
ಎಲ್.ಕೆ. ಅಡ್ವಾಣಿ ಪರ ವಾದಿಸುತ್ತಿರುವ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡುವಂತೆ ನ್ಯಾಯಾಲಯವನ್ನು ಕೇಳಿಕೊಂಡರು.
ನೀವು ನಾನು ನಿವೃತ್ತಿಯಾಗುವ ತನಕ ಕಾಯಲು ಬಯಸಿದ್ದೀರಾ? ಎಂದು ವೇಣುಗೋಪಾಲ್‌ಗೆ ಜಸ್ಟಿಸ್ ಘೋಷ್ ತಮಾಷೆಯಾಗಿ ಕೇಳಿದರು. ಜಸ್ಟಿಸ್ ಘೋಷ್ ಮೇನಲ್ಲಿ ನಿವೃತ್ತಿಯಾಗಲಿದ್ದಾರೆ.
ತಾಂತ್ರಿಕ ನೆಲೆಯಲ್ಲಿ ಅಡ್ವಾಣಿ ಸಹಿತ 13 ಮುಖಂಡರ ವಿರುದ್ಧ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಕೈಬಿಟ್ಟಿರುವುದಕ್ಕೆ ಮಾ.6 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತ್ತು. ಆರೋಪಿಗಳ ವಿರುದ್ಧ ಪಿತೂರಿ ಪ್ರಕರಣಕ್ಕೆ ಮರುಜೀವ ನೀಡುವ ಕುರಿತು ಸುಳಿವು ನೀಡಿತ್ತು.







