ದಿಲ್ಲಿಯಿಂದ ನಾಪತ್ತೆಯಾದ ಸಿಎ ವಿದ್ಯಾರ್ಥಿ ತಿಂಗಳ ಬಳಿಕ ನೇಪಾಳದಲ್ಲಿ ಪತ್ತೆಯಾಗಿದ್ದು ಹೇಗೆ ?
ಹೊಸದಿಲ್ಲಿ, ಮಾ.22: ದಿಲ್ಲಿಯಿಂದ ಫೆಬ್ರವರಿ 18ರಂದು ನಾಪತ್ತೆಯಾಗಿದ್ದ ಶುಭಂ ಮಹೇಶ್ವರಿ ಎಂಬ ಸಿಎ ವಿದ್ಯಾರ್ಥಿಯನ್ನು ನೇಪಾಳದಲ್ಲಿ ಪತ್ತೆ ಹಚ್ಚಲಾಗಿದೆ. ಆತ ನೇಪಾಳಕ್ಕೆ ಸ್ವಯಂಪ್ರೇರಣೆಯಿಂದ ಹೋಗಿದ್ದಾಗಿ ಹಾಗೂ ಅಲ್ಲಿನ ಶಾಲೆಯೊಂದರಲ್ಲಿ ಮಕ್ಕಳಿಗೆ ಕಲಿಸುತ್ತಿದ್ದನೆಂದು ತಿಳಿದು ಬಂದಿದೆ.
ಫೆಬ್ರವರಿ 18ರಂದು ಬೆಳಿಗ್ಗೆ 6:50ಕ್ಕೆ ಶುಭಂ ಆನಂದ್ ವಿಹಾರ್ ಪ್ರದೇಶದಿಂದ ತನ್ನ ಹುಟ್ಟೂರಾದ ಹಥ್ರಸ್ ಗೆ ಹೋಗಲು ಬಸ್ಸೊಂದನ್ನು ಹತ್ತಿದ್ದ. ಬಸ್ಸು ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ ಜೆವರ್ ಟೋಲ್ ಪ್ಲಾಝಾದ ಸಮೀಪ 9:30ಕ್ಕೆ ಚಹಾ ವಿರಾಮಕ್ಕಾಗಿ ನಿಂತಿದ್ದ ವೇಳೆ ಆತ ತನ್ನ ತಾಯಿಯೊಡನೆ ಫೋನಿನಲ್ಲಿ ಮಾತನಾಡಿದ್ದ. ಆದರೆ ನಂತರ ಆತನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು.
ಆತ ಮನೆಗೆ ತಲುಪದಿದ್ದಾಗ ಆತಂಕಕ್ಕೀಡಾದ ಆತನ ಕುಟುಂಬ ಆತನಿಗಾಗಿ ಹುಡುಕಾಡಿ ಕೊನೆಗೆ ದಿಲ್ಲಿಯ ಶಕರಪುರ ಪೊಲೀಸ್ ಠಾಣೆಯಲ್ಲಿ ನಾಫತ್ತೆ ದೂರು ದಾಖಲಿಸಿತ್ತು. ಪೊಲೀಸ್ ತನಿಖೆಯ ವೇಳೆ ಶುಭಂ ಫೋನ್ ಕಡೆಯದಾಗಿ ಅಲಿಘರ್ ನ ತಪ್ಪಲ್ ಪ್ರದೇಶದಲ್ಲಿತ್ತು ಎದು ಪತ್ತೆ ಹಚ್ಚಲಾಯಿತು. ಪೊಲೀಸ್ ತಂಡವೊಂದು ಹಲವಾರು ಜಿಲ್ಲೆಗಳಲ್ಲಿ ಹಾಗೂ ಲಕ್ನೋದಲ್ಲಿ ಆತನಿಗಾಗಿ ಹುಡುಕಾಟ ನಡೆಸಿ ಕೊನೆಗೆ ನೇಪಾಳದಲ್ಲಿ ಆತನನ್ನು ಪತ್ತೆ ಹಚ್ಚಿ, ಈಗ ಆತನನ್ನು ಮನೆಗೆ ಕರೆದುಕೊಂಡು ಬರಲಾಗುತ್ತಿದೆ.