ಉತ್ತರ ಪ್ರದೇಶದಲ್ಲಿ ಗೋಮಾಂಸದ ಅಂಗಡಿಗಳಿಗೆ ಬೆಂಕಿ

ಹಥ್ರಾಸ್,ಮಾ.22: ಇಲ್ಲಿಯ ಮೂರು ಗೋಮಾಂಸ ಮತ್ತು ಮೀನು ಮಾರಾಟದ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದು, ಈ ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿಯ ಕೆಲವು ಕಸಾಯಿಖಾನೆಗಳನ್ನು ಮುಚ್ಚಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಮಂಗಳವಾರ ತಡರಾತ್ರಿ ಮಾನ್ಯವರ ಕಾನ್ಶಿರಾಂ ಕಾಲನಿಯಲ್ಲಿಯ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು,ದಾಸ್ತಾನು ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಅಂಗಡಿಗಳ ಮಾಲಕರು ತಿಳಿಸಿದರು.
ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹಥ್ರಾಸ್ ಎಸ್‌ಪಿ ದಿಲೀಪ ಕುಮಾರ್ ಶ್ರೀವಾಸ್ತವ ಅವರು ತಿಳಿಸಿದರು.
ರಾಜ್ಯದಲ್ಲಿ ತಾನು ಅಧಿಕಾರಕ್ಕೆ ಬಂದರೆ ಯಾಂತ್ರೀಕೃತ ಕಸಾಯಿಖಾನೆಗಳನ್ನು ನಿಷೇಧಿಸುವ ಜೊತೆಗೆ ಎಲ್ಲ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಮಂಗಳವಾರ ಇಲ್ಲಿಯ ಕಮಲ್‌ಗದಹಾ ಬಡಾವಣೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಯೊಂದನ್ನು ಅಧಿಕಾರಿಗಳು ಮುಚ್ಚಿಸಿದ್ದರು.
ಘಾಝಿಯಾಬಾದ್‌ನಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದವೆನ್ನಲಾದ 10 ಮಾಂಸ ಮಾರಾಟ ಅಂಗಡಿಗಳು ಮತ್ತು ನಾಲ್ಕು ಕಸಾಯಿಖಾನೆಗಳಿಗೆ ಪೊಲೀಸರು ಮಂಗಳವಾರ ಬೀಗಮುದ್ರೆ ಹಾಕಿದ್ದರು.