ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಮುಂದಾಗಿದ್ದ 'ಕುಮಾರ ಕಂಠೀರವ'ನ ಸೆರೆ

ಪುಣೆ,ಮಾ.22: ಇಲ್ಲಿಯ ಬಿಬ್ವೆವಾಡಿಯಲ್ಲಿ ಜನ್ಮ ನೀಡಿದ ತಾಯಿಯ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಅತ್ಯಾಚಾರಕ್ಕೆ ಮುಂದಾಗಿದ್ದ 39ರ ಹರೆಯದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವೇಳೆ ಪಾನಮತ್ತನಾಗಿದ್ದ ಆರೋಪಿ ನಡೆದಿದ್ದೇನು ಎನ್ನುವದು ತನಗೆ ನೆನಪಿಲ್ಲ ಮತ್ತು ಮದ್ಯಸೇವನೆ ತಾನು ಎಸಗಿದ್ದೇನೆ ಎನ್ನಲಾಗಿರುವ ಕೃತ್ಯಕ್ಕೆ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾನೆ.
ಮಗನ ಅನುಚಿತ ವರ್ತನೆಯಿಂದ ಕಂಗೆಟ್ಟ 58ರ ಹರೆಯದ ಮಹಿಳೆ ರವಿವಾರ ತಡರಾತ್ರಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸೋಮವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ವಾಹನ ಚಾಲಕನಾಗಿರುವ ಆರೋಪಿ ಅಂದು ರಾತ್ರಿ ಸಂಪೂರ್ಣ ಪಾನಮತ್ತನಾಗಿದ್ದು, ಮನೆಗೆ ಬಂದವನೇ ಊಟಕ್ಕೆ ಕುಳಿತಿದ್ದ ತಾಯಿಯ ಎದುರು ಹುಟ್ಟುಡುಗೆಯಲ್ಲಿ ನಿಂತಿದ್ದ. ಸಹಜವಾಗಿಯೇ ಆಕೆ ಬೈದು ಬಟ್ಟೆಗಳನ್ನು ಧರಿಸುವಂತೆ ಮಗನಿಗೆ ಹೇಳಿದ್ದಳು. ಆದರೆ ಅದಕ್ಕೆ ಕಿವಿಗೊಡದ ಆತ ಆಕೆಯ ಮೇಲೆ ಅತ್ಯಾಚಾರ ವೆಸಗಲು ಪ್ರಯತ್ನಿಸಿದ್ದ. ಕೈಯಲ್ಲಿದ್ದ ಊಟದ ಬಟ್ಟಲಿನಿಂದ ಮಗನಿಗೆ ಹೊಡೆದು ತಪ್ಪಿಸಿಕೊಂಡ ಮಹಿಳೆ ಮನೆಯಿಂದ ಹೊರಗೋಡಿ ಬಂದು, ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಪೊಲೀಸ್ ಠಾಣೆಗೆ ಧಾವಿಸಿದ್ದಳು.
ಆರೋಪಿಯನ್ನು ಬಂಧಿಸಲು ರಾತ್ರಿಯೇ ಪೊಲೀಸರು ಮನೆಗೆ ತೆರಳಿದಾಗ ಆತ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. ಸೋಮವಾರ ಬೆಳಿಗ್ಗೆ ಆತನಿಗೆ ಪ್ರಜ್ಞೆ ಬಂದ ನಂತರವೇ ಬಂಧಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಬೆಳಿಗ್ಗೆ ಪೊಲೀಸರು ಬಂದಾಗ ಆತ ಇನ್ನೂ ಪ್ರಜ್ಞಾಹೀನನಾಗಿದ್ದು, ತನ್ನದೇ ಮಲಮೂತ್ರಗಳ ನಡುವೆ ಬಿದ್ದುಕೊಂಡಿದ್ದ. ಆತನನ್ನು ಎಬ್ಬಿಸಿದ ಪೊಲೀಸರು ಆತನಿಗೆ ಸ್ನಾನ ಮಾಡಿಸಿ ಬಂಧಿಸುವಷ್ಟರಲ್ಲಿ ಸಂಜೆಯಾಗಿತ್ತು.
ಆರೋಪಿಯು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಆತನ ವರ್ತನೆಯಿಂದ ಬೇಸತ್ತ ಪತ್ನಿ ಎರಡು ವರ್ಷಗಳ ಹಿಂದೆಯೇ ತೊರೆದು ಹೋಗಿದ್ದಾಳೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.







