ಬಡ ವ್ಯಾಪಾರಿಯ ಮೇಲೆ ಪೊಲೀಸ್ ಅಧಿಕಾರಿಯ ದರ್ಪದ ಚಿತ್ರ ವೈರಲ್: ವ್ಯಾಪಕ ಆಕ್ರೋಶ

ಹೈದರಾಬಾದ್, ಮಾ. 22 : ಪೊಲೀಸ್ ಅಧಿಕಾರಿಯೊಬ್ಬ ಬಡಪಾಯಿ ಕಲ್ಲಂಗಡಿ ಹಣ್ಣು ವ್ಯಾಪಾರಿಯ ಜೊತೆ ಅತ್ಯಂತ ದರ್ಪದಿಂದ ವರ್ತಿಸಿರುವ ಫೋಟೋ ವೈರಲ್ ಆಗಿದ್ದು , ತೆಲಂಗಾಣ ಸಚಿವ ಕೆ ಟಿ ರಾಮರಾವ್ ಈ ಬಗ್ಗೆ ರಾಜ್ಯ ಡಿಜಿಪಿ ಅನುರಾಗ್ ಶರ್ಮ ಅವರಲ್ಲಿ ವಿವರಣೆ ಕೇಳಿದ್ದಾರೆ .
ಗಣ್ಯರ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಹೈದರಾಬಾದ್ ನ ಉಪ್ಪಲ್ ಟ್ರಾಫಿಕ್ ಇನ್ಸ್ ಪೆಕ್ಟರ್ ಹಣ್ಣಿನ ವ್ಯಾಪಾರಿಯ ಜೊತೆ ಕೆಟ್ಟದಾಗಿ ವರ್ತಿಸಿರುವ ಈ ಘಟನೆ ಮಾರ್ಚ್ 15 ರಂದು ನಡೆದಿದೆ ಎನ್ನಲಾಗಿದ್ದು ಸನ್ನಿ ಎಂಬವರು ತೆಗೆದ ಚಿತ್ರ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಫೋಟೋದಲ್ಲಿ ಅಧಿಕಾರಿ ಕಲ್ಲಂಗಡಿ ಹಣ್ಣೊಂದನ್ನು ವ್ಯಾಪಾರಿಯ ಮೇಲೆ ಎಸೆಯುವುದನ್ನು ಕಾಣಬಹುದು.
" ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಿದೆ. ಜನರೊಂದಿಗೆ ನೇರವಾಗಿ ವ್ಯವಹರಿಸುವ ಕಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ತರಬೇತಿ ಅಗತ್ಯ " ಎಂದು ತೆಲಂಗಾಣ ಡಿಜಿಪಿ ರಾಮರಾವ್ ಟ್ವೀಟ್ ಮಾಡಿದ್ದಾರೆ.
ಈಗ ಆ ಇನ್ಸ್ ಪೆಕ್ಟರ್ ಗೆ ನೋಟಿಸ್ ನೀಡಲಾಗಿದೆ. ಹಲವು ಬಾರಿ ಹೇಳಿಯೂ ವ್ಯಾಪಾರಿ ತನ್ನ ಗಾಡಿ ತೆಗೆಯಲು ನಿರಾಕರಿಸಿದಾಗ ಸಿಟ್ಟಾಗಿ ಅಧಿಕಾರಿ ಈ ರೀತಿ ವರ್ತಿಸಬೇಕಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.
" ಅವರಿಗೆ ಚಲನ್ ನೀಡುವ ಅವಕಾಶವಿತ್ತು. ಆದರೆ ಅವರು ಅತ್ಯಂತ ಒರಟಾಗಿ ವರ್ತಿಸಿದರು. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಡಿಸಿಪಿ ದಿವ್ಯ ಚರಣ್ ರಾವ್ ಹೇಳಿದ್ದಾರೆ.







