ಯುನಿವೆಫ್ ನಿಂದ ಉಚಿತ ವೈದ್ಯಕೀಯ ಶಿಬಿರ

ಮಂಗಳೂರು,ಮಾ.22: ಯುನಿವೆಫ್ ಕರ್ನಾಟಕ ಇದರ ಕುದ್ರೋಳಿ ಶಾಖೆಯ ವತಿಯಿಂದ, ಅಶೋಕನಗರದ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಸಹಯೋಗದಲ್ಲಿ, ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ಇತ್ತೀಚೆಗೆ ಕುದ್ರೋಳಿಯ ದಾರ್ ಅರ್ಕಮ್‌ನಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು “ಇಂದು ಆರೋಗ್ಯದ ಬಗೆಗಿನ ಅರಿವಿನ ಕೊರತೆ ಹಾಗೂ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳ ಮಾಹಿತಿಯ ಕೊರತೆಯಿಂದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರು ಈಗಲೂ ಹಲವಾರು ರೋಗರುಜಿನಗಳಿಂದ ನರಳುವುದನ್ನು ನಾವು ಕಾಣುತ್ತೇವೆ.
ಪುರಾತನ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆಯ ಬಗ್ಗೆ ಜನರು ಕೀಳರಿಮೆ ಬೆಳೆಸಿಕೊಂಡಿರುವುದನ್ನೂ ನಾವು ಕಾಣಬಹುದು. ಆರೋಗ್ಯ ರಕ್ಷಣೆಯ ಜೊತೆಗೆ ಈ ಚಿಕಿತ್ಸಾ ಪದ್ಧತಿಗಳ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡಿ ಅದರ ಬಗ್ಗೆ ಅವರಲ್ಲಿ ನಂಬಿಕೆ ಹಾಗೂ ಭರವಸೆಯನ್ನು ತುಂಬಲು ಇಂತಹ ವೈದ್ಯಕೀಯ ಶಿಬಿರಗಳ ಅಗತ್ಯವಿದೆ” ಎಂದು ಹೇಳಿದರು.
ಕರ್ನಾಟಕ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸುಭಾಶ್ ರೈಯವರು ತಮ್ಮ ಆಸ್ಪತ್ರೆಯಲ್ಲಿ ದೊರಕುವ ವೈದ್ಯಕೀಯ ಸೌಲಭ್ಯ ಹಾಗೂ ಉಚಿತ ಒಳರೋಗಿ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು. ಕಣ್ಣು, ಕಿವಿ, ಮೂಗು, ಗಂಟಲು ತಜ್ಞೆ ಡಾ. ವೀಣಾ ವಿನಾಯಕ್ ಹಾಗೂ ಆಸ್ಪತ್ರೆಯ ಇತರ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ತನಕ ನಡೆದ ಈ ಶಿಬಿರದಲ್ಲಿ ನೂರಾರು ರೋಗಿಗಳಿಗೆ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಲಾಯಿತು.
ಯುನಿವೆಫ್ ಕಾರ್ಯದರ್ಶಿ ಯು.ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಸೈಫುದ್ದೀನ್ ವಂದಿಸಿದರು.







