ಜು.1ರಿಂದ ಜಿಎಸ್‌ಟಿ ಜಾರಿ:ಜೇಟ್ಲಿ ಆಶಯ

ಹೊಸದಿಲ್ಲಿ,ಮಾ.22: ವಿಶ್ವದ ಅತಿದೊಡ್ಡ ಏಕೈಕ ಮಾರುಕಟ್ಟೆಯನ್ನು ಸೃಷ್ಟಿಸಲು, ಸರಕುಗಳನ್ನು ಅಗ್ಗವಾಗಿಸಲು ಮತ್ತು ತೆರಿಗೆ ವಂಚನೆಯನ್ನು ಕಠಿಣವಾಗಿಸಲು ನೂತನ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯು ಜುಲೈ 1ರಿಂದ ಜಾರಿ ಗೊಳ್ಳಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಹೇಳಿದರು.
ಕಾಮನ್‌ವೆಲ್ತ್ ಆಡಿಟರ್ ಜನರಲ್‌ನ 23ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೆಚ್ಚಿನ ಜನರು ತೆರಿಗೆ ಜಾಲದಿಂದ ಹೊರಗಿದ್ದಾರೆ ಮತ್ತು ತೆರಿಗೆ ವಂಚನೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವಿಗೆ ಕಾರಣವಾಗುವ ನಗದು ವಹಿವಾಟಿನ ಜನರ ಪ್ರವೃತ್ತಿಗೆ ಕಡಿವಾಣ ಹಾಕಲು ಸರಕಾರವು 500 ಮತ್ತು 1,000 ರೂ. ನೋಟುಗಳನ್ನು ನಿಷೇಧಿಸಿತ್ತು ಎಂದರು.
ಸರಕಾರವು ಕೈಗೊಂಡಿರುವ ಸುಧಾರಣೆ ಕ್ರಮಗಳು ಭಾರತವು ಶೇ.7-8ರ ಬೆಳವಣಿಗೆ ದರವನ್ನು ಸಾಧಿಸಲು ಮತ್ತು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಲು ನೆರವಾಗಲಿವೆ. ಆದರೆ ಜಾಗತಿಕ ತೈಲಬೆಲೆಗಳಲ್ಲಿ ಏರಿಳಿತಗಳು, ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯ ಪುನಃಶ್ಚೇತನ ಮತ್ತು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಆರ್ಥಿಕ ಸ್ಥಿತಿ ಇವು ಸವಾಲುಗಳಾಗಿಯೇ ಉಳಿದುಕೊಂಡಿವೆ ಎಂದು ಹೇಳಿದರು. ಜಿಎಸ್‌ಟಿಗೆ ಸಂಬಂಧಿಸಿದಂತೆ ಅವರು, ನೂತನ ಪರೋಕ್ಷ ತೆರಿಗೆ ವ್ಯವಸ್ಥೆಯು ಸರಕು ಮತ್ತು ಸೇವೆಗಳ ಸುಲಲಿತ ವರ್ಗಾವಣೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರಬಲ ಮಾಹಿತಿ ತಂತ್ರಜ್ಞಾನ ಬೆಂಬಲವು ತೆರಿಗೆ ವಂಚನೆಯನ್ನು ಕಠಿಣವಾಗಿಸಲಿದೆ ಎಂದರು.
ಭಾರತವು ರಾಜಕೀಯವಾಗಿ ಒಂದೇ ದೇಶವಾಗಿದ್ದರೂ ಪ್ರಸಕ್ತ ಏಕೈಕ ಆರ್ಥಿಕ ವ್ಯವಸ್ಥೆಯಾಗಿಲ್ಲ. ಹಲವಾರು ಸ್ತರಗಳಲ್ಲಿ ತೆರಿಗೆಯನ್ನು ವಿಧಿಸಲಾಗುತ್ತಿದ್ದು, ಇದು ಸರಕು ಗಳನ್ನು ದುಬಾರಿಯಾಗಿಸುತ್ತಿದೆ. 2006ರಲ್ಲಿ ಮೊದಲ ಬಾರಿಗೆ ಪ್ರಸ್ತಾವಗೊಂಡಿದ್ದ ಜಿಎಸ್‌ಟಿಯು 17 ರಾಜ್ಯ ಮತ್ತು ಕೇಂದ್ರೀಯ ತೆರಿಗೆಗಳಿಗೆ ಬದಲಿಯಾಗಿ ಕೊನೆಗೂ ಜಾರಿಗೆ ಬರುತ್ತಿದೆ ಎಂದು ಅವರು ಹೇಳಿದರು.
ನಾಲ್ಕು ಪೂರಕ ಜಿಎಸ್‌ಟಿ ಮಸೂದೆಗಳಿಗೆ ಕೇಂದ್ರ ಸಂಪುಟವು ಈ ವಾರ ಒಪ್ಪಿಗೆ ನೀಡಿದ್ದು,ಹಾಲಿ ಪ್ರಗತಿಯಲ್ಲಿರುವ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿವೆ .ಇವು ಅಂಗೀಕಾರಗೊಂಡವೆಂದರೆ ಜುಲೈನಿಂದ ಜಿಎಸ್‌ಟಿ ಜಾರಿಗೊಳ್ಳುತ್ತದೆ ಎಂದು ಜೇಟ್ಲಿ ಆಶಯ ವ್ಯಕ್ತಪಡಿಸಿದರು.







