ಕೆಲಸ ಇಲ್ಲದಾಗ ಇವರೆಲ್ಲಾ ಎಲ್ಲಿ ಹೋಗಿದ್ದರು?: ಸುಲೋಚನಾ ಹರೀಶ್

ಮಂಗಳೂರು, ಮಾ.22: ನನ್ನ ಜಾತಿ-ಧರ್ಮವೇ ಶ್ರೇಷ್ಠ ಎನ್ನುವವವರು, ಹೊಡಿ-ಬಡಿ-ಕೊಲ್ಲು ಎಂದು ಆದೇಶಿಸುವವರು, ಬೆಂಕಿ ಹಚ್ಚುತ್ತೇವೆಂದು ಹೇಳುವವರು, ಬೆನ್ನಟ್ಟಿ ಬಡಿಯುತ್ತೇವೆಂದು ಬೊಬ್ಬಿಡುವವರು, ಮಹಿಳೆಯನ್ನು ಭಾರತ ಮಾತೆ ಎಂದು ಕೊರೆಯುವವರು ಮಹಿಳಾ ಬೀಡಿ ಕಾರ್ಮಿಕರಿಗೆ ಕೆಲಸವಿಲ್ಲದಾಗ ಎಲ್ಲಿ ಹೋಗಿದ್ದರು? ಎಂದು ಸುಲೋಚನಾ ಹರೀಶ್ ಕವತ್ತಾರು ಪ್ರಶ್ನಿಸಿದರು.
ಎಐಟಿಯುಸಿ ನೋಂದಾಯಿತ ಬೀಡಿ ಆ್ಯಂಡ್ ಟೊಬೆಕ್ಕೊ ಲೇಬರ್ ಯೂನಿಯನ್‌ನ 81ನೆ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬೀಡಿ ಕೈಗಾರಿಕೆಯ ಅವನತಿಗೆ ಕಾರಣವಾಗುವ ‘ಕೊಟ್ಪಾ’ ಕಾಯ್ದೆಯನ್ನು ಜಾರಿ ಮಾಡಿದಾಗ, ಬೀಡಿ ಕಾರ್ಮಿಕ ಹೆಣ್ಣು ಮಕ್ಕಳು-ಸೌಜನ್ಯಾಳಂತಹವರು ಕಾಮುಕರಿಗೆ ಬಲಿಯಾದಾಗ ‘ಸ್ತ್ರೀ ಭಾಗ್ಯ’ದ, ‘ಭಾರತ ಮಾತೆ’ಯ ನೆನೆಪಾಗಲಿಲ್ಲವೇಕೆ? ವಿನಾಯಕ ಬಾಳಿಗಾ-ಹರೀಶ್ ಪೂಜಾರಿ- ಪ್ರವೀಣ್ ಪೂಜಾರಿಯಂತಹವರು ಹತ್ಯೆಯಾದಾಗ, ಕಪಟ ನಾಯಕರ ಸ್ವಾರ್ಥ ಸಂಚಿಗೆ ಬಲಿಯಾಗಿ ಬಡ ಯುವ ಪೀಳಿಗೆ ಜೈಲು ಪಾಲಾಗುತ್ತಿರುವಾಗ ಜಾತಿ-ಧರ್ಮ ಎಲ್ಲಿ ಹೋಯಿತು?ಎಂದು ಪ್ರಶ್ನಿಸಿದ ಅವರು ಈ ಎಲ್ಲಾ ಅವ್ಯವಸ್ಥೆಗಳ ವಿರುದ್ಧ ಸಿಡಿದೆದ್ದು ತಮ್ಮ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಅವರನ್ನು ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳಿಸಬೇಕಾದ ಜವಬ್ದಾರಿ ನಮ್ಮ ಮಹಿಳೆಯರ ಮೇಲಿದೆ. ಇದಕ್ಕಾಗಿ ನಾವು ರಾಜಕೀಯವಾಗಿ ಜಾಗೃತರಾಗಿ ಕಾರ್ಯಾಚರಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಪಕ್ಷವೆಂಬುದು ಸುಳ್ಳಿನ ಪಾಠ ಶಾಲೆ. ಅದರ ನಾಯಕ ಮೋದಿಗೆ ನಟನಾ ಸಾಮರ್ಥ್ಯವಿದೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯುವುದು ಮುಖ್ಯವಾಗಿದೆಯೇ ಹೊರತು ಜನಸಾಮಾನ್ಯರ-ಕಾರ್ಮಿಕರ ಹಿತ ಮುಖ್ಯವಲ್ಲ. ಭಾಗ್ಯಗಳ ಸರದಾರ ಸಿದ್ದರಾಮಯ್ಯರನ್ನು ಕೆಲಸ ಮಾಡಲು ಬಿಡದ ಕಾಂಗ್ರೆಸ್‌ಗೆ ಸ್ವಾರ್ಥವೇ ಮೇಲಾಯಿತು. ಕೋಮು ಸಂಘರ್ಷದ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿಯಿಂದ ಸಾಮಾಜಿಕ ನ್ಯಾಯದ ಅಭಿವೃದ್ದಿಯನ್ನು ನಿರಿಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕವೂ ಸ್ವಾರ್ಥಿಗಳ, ಅಧಿಕಾರದಾಹಿಗಳ, ಭ್ರಷ್ಟಾಚಾರಿಗಳ ಆಳ್ವಿಕೆಗೊಳಗಾಗುವುದು ನಿಶ್ಚಿತ. ಈ ಬಗ್ಗೆ ಜನರು ರಾಜಕೀಯವಾಗಿ ಜಾಗೃತಿಯಾಗಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಹೇಳಿದರು.
ಎಐಟಿಯುಸಿ ನಾಯಕರಾದ ಬಿ. ಶೇಕರ್, ಎ.ಪಿ. ರಾವ್, ಚಂದಪ್ಪಅಂಚನ್ ಮಾತನಾಡಿದರು. ಸುರೇಶ್ ಕುಮಾರ್, ಕೆ. ಈಶ್ವರ್, ಸರಸ್ವತಿ ಕೆ., ದಯಾವತಿ, ಗುಣವತಿ ಉಪಸ್ಥಿತರಿದ್ದರು.
ಮುಂದಿನ ಅವಧಿಗೆ 59 ಜನರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸುಲೋಚನಾ ಕವತ್ತಾರು, ಉಪಾಧ್ಯಕ್ಷರಾಗಿ ಎಚ್. ರಾವ್, ಎಂ. ಶಿವಪ್ಪಕೋಟ್ಯಾನ್, ಸೆಲಿಮತ್ ಪಂಜಿಮೊಗರು, ಕಾರ್ಯದರ್ಶಿಯಾಗಿ ವಿ.ಎಸ್. ಬೇರಿಂಜ, ಕೋಶಾಧಿಕಾರಿಯಾಗಿ ಎಂ. ಕರುಣಾಕರ್, ಜೊತೆ ಕಾರ್ಯದರ್ಶಿಯಾಗಿ ಚಿತ್ರಾಕ್ಷಿ ಕುಂಜತ್ತ್‌ಬೈಲ್, ರೂಪಾ ಸಿದ್ದಾರ್ಥನಗರ, ದಯಾವತಿ ಕರ್ನಿರೆ- ಆಯ್ಕೆಯಾದರು.







