ಆಹಾರ ಭದ್ರತಾ ಕಾಯ್ದೆ ಅನುಷ್ಠಾನದಲ್ಲಿ ವೈಫಲ್ಯ: 9 ಬರಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಬುಲಾವ್
ಹೊಸದಿಲ್ಲಿ,ಮಾ.22: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್‌ಎಫ್‌ಎಸ್‌ಎ)ಯ ಅನುಷ್ಠಾನದಲ್ಲಿ ವೈಫಲ್ಯಕ್ಕಾಗಿ ಕರ್ನಾಟಕ ಸೇರಿದಂತೆ ಒಂಭತ್ತು ಬರಪೀಡಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಸಮನ್ಸ್ ಹೊರಡಿಸಿದೆ.
ಕಾಯ್ದೆಯು ಅಸ್ತಿತ್ವಕ್ಕೆ ಬಂದು ಸಾಕಷ್ಟು ಕಾಲವು ಸರಿದಿದ್ದರೂ ಅದನ್ನು ಅನುಷ್ಠಾನಿಸುವಲ್ಲಿ ಈ ರಾಜ್ಯಗಳು ವಿಫಲಗೊಂಡಿವೆ ಎಂದು ಹೇಳಿದ ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠವು, ಸಂಸದೀಯ ಶಾಸನಕ್ಕೆ ಮಹತ್ವ ನೀಡಲಾಗುತ್ತಿಲ್ಲ ಎನ್ನುವುದು ಕಳವಳದ ವಿಷಯವಾಗಿದೆ. ಇದರಲ್ಲಿ ಸಂವಿಧಾನದ ವಿಧಿ 21(ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ ಹಕ್ಕು) ಕೂಡ ಸೇರಿದೆ. ಎನ್‌ಎಫ್‌ಎಸ್‌ಎದ ಕಲಂ 16ರಲ್ಲಿ ಆದೇಶಿಸಿರುವಂತೆ ರಾಜ್ಯ ಆಹಾರ ಆಯೋಗವನ್ನು ನೇಮಕಗೊಳಿಸಲಾಗಿಲ್ಲ ಎಂದು ಬೆಟ್ಟು ಮಾಡಿತು.
ಈ ಹಿನ್ನೆಲೆಯಲ್ಲಿ ನಾವು ರಾಜ್ಯ ಮುಖ್ಯಕಾರ್ಯದರ್ಶಿಗಳನ್ನು ಕರೆಸುತ್ತಿದ್ದೇವೆ.ರಾಜ್ಯ ಆಹಾರ ಆಯೋಗಗಳನ್ನು ನೇಮಿಸಲು ನಮಗೆ ಅವರ ಅಗತ್ಯವಿದೆ ಮತ್ತು ಅವರು ಎಲ್ಲ ವಿವರಗಳನ್ನು ಒದಗಿಸಬೇಕಾಗಿದೆ ಎಂದು ಪೀಠವು ಹೇಳಿತು.
ಕರ್ನಾಟಕ,ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್, ಮಧ್ಯಪ್ರದೇಶ, ಬಿಹಾರ, ಹರ್ಯಾಣ ಮತ್ತು ಛತ್ತೀಸ್‌ಗಡ ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಹೊರಡಿಸಲಾಗಿದೆ.
ನ್ಯಾಯಾಲಯವು ತೆಲಂಗಾಣ,ಒಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕೆಲವು ನಿರ್ದೇಶಗಳನ್ನು ಪಾಲಿಸಿರುವ ಹಿನ್ನಲೆಯಲ್ಲಿ ಅವುಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್‌ನಿಂದ ವಿನಾಯಿತಿ ನೀಡಿದೆ.
ಬರಪೀಡಿತ ರಾಜ್ಯಗಳಲ್ಲಿ ರೈತರಿಗೆ ವಿವಿಧ ಪರಿಹಾರಗಳನ್ನು ಕೋರಿ ಎನ್‌ಜಿಒ ಸ್ವರಾಜ್ ಅಭಿಯಾನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.