ಬಂಟ್ವಾಳ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬಂಟ್ವಾಳ, ಮಾ. 22: ವಿಟ್ಲದ ನಳಿನಿ ಫೈನಾನ್ಸ್ ಮೂಲಕ ಹಲವು ಜನರಿಗೆ ಪಂಗನಾಮ ಹಾಕಿ ತಲೆಮರೆಸಿಕೊಂಡಿದ್ದ ಮೂರನೆ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ಎರಡು ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ಬೋಳಂತೂರು ಗ್ರಾಮದ ಬೀರುಕೋಡಿ ನಿವಾಸಿ ತಾರಾನಾಥ ಶೆಟ್ಟಿಗಾರ್ ಶಿಕ್ಷೆಗೊಳಗಾದ ಆರೋಪಿ. ಈತ ಇತರ ಇಬ್ಬರ ಜೊತೆ ಸೇರಿಕೊಂಡು ನಳಿನಿ ಹೆಸರಿನ ಫೈನಾನ್ಸ್ ಸ್ಥಾಪಿಸಿ ಅದರ ಮೂಲಕ ಹಲವು ಜನರಿಗೆ ವಿವಿಧ ಆಮೀಷಗಳನ್ನು ಒಡ್ಡಿ ಮೋಸ ಮಾಡಿದ್ದ.ವಂಚನೆಗೊಳಗಾದವರು ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿದ್ದ ಗ್ರಾಹಕರ ನ್ಯಾಯಾಲಯ ತನಿಖೆ ಆರಂಭಿಸಿತ್ತಾದರೂ ಪ್ರಕರಣದ ವಿಚಾರಣೆಗೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಆ ಪೈಕಿ ಇಬ್ಬರನ್ನು ಮೊನ್ನೆಯಷ್ಟೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಪೊಲೀಸರು ಮೂರನೆ ಆರೋಪಿ ತಾರಾನಾಥ ಶೆಟ್ಟಿಗಾರ್‌ವನ್ನು ಇಂದು ಬಂಧಿಸಿ ನ್ಯಾಯಾಯಲಕ್ಕೆ ಹಾಜರು ಪಡಿಸಿದರು. ನ್ಯಾಯಾಲಯವು ಆರೋಪಿಗೆ ಎರಡು ವರ್ಷ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದೆ.
ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಮಾರ್ಗದರ್ಶನದಲ್ಲಿ ವಿಟ್ಲ ಎಸೈ ನಾಗರಾಜ್ ಹಾಗೂ ಸಿಬ್ಬಂದಿಯಾದ ರಮೇಶ್ ಹಾಗೂ ಇಬ್ರಾಹೀಂ ಅವರಿದ್ದ ತಂಡ ಆರೋಪಿಯನ್ನು ಬಂಧಿಸಿದೆ.





