ಕರ್ತವ್ಯ ಮುಂದುವರಿಸದಿದ್ದರೆ ಅಮಾನತು: ಪ್ರತಿಭಟನಾ ನಿರತ ವೈದ್ಯರಿಗೆ ಸರಕಾರದ ಎಚ್ಚರಿಕೆ

ಮುಂಬೈ, ಮಾ.22: ಪ್ರತಿಭಟನಾ ನಿರತ ಸ್ಥಳೀಯ ವೈದ್ಯರಿಗೆ ಅಂತಿಮ ಎಚ್ಚರಿಕೆ ನೀಡಿರುವ ಮಹಾರಾಷ್ಟ್ರ ಸರಕಾರ, ಕರ್ತವ್ಯಕ್ಕೆ ಹಾಜರಾಗಿ. ಇಲ್ಲದಿದ್ದರೆ ಅಮಾನತು ಶಿಕ್ಷೆ ಎದುರಿಸಲು ಸಿದ್ಧರಾಗಿ ಎಂದು ತಿಳಿಸಿದೆ.
ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ವೈದ್ಯರಿಗೆ ನಿರ್ದೇಶನ ನೀಡಿತ್ತು. ತಾವು ಮುಷ್ಕರ ನಡೆಸುವುದಿಲ್ಲ ಎಂದು ಮಹಾರಾಷ್ಟ್ರ ಸ್ಥಳೀಯ ವೈದ್ಯರ ಸಂಘಟನೆ ನ್ಯಾಯಾಲಯಕ್ಕೆ ನೀಡಿದ್ದ ವಾಗ್ದಾನ ಉಲ್ಲಂಘಿಸಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ಸೂಚಿಸಿತು.
ಬುಧವಾರ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಎಸಗಿದ ಆರೋಪದಲ್ಲಿ ಸೋಲಾಪುರದಲ್ಲಿ 100ಕ್ಕೂ ಹೆಚ್ಚಿನ ವೈದ್ಯರಿಗೆ ಅಮಾನತು ನೋಟಿಸ್ ಜಾರಿಗೊಳಿಸಲಾಗಿದೆ. ಪುಣೆಯಲ್ಲೂ ವೈದ್ಯರನ್ನು ಅಮಾನತುಗೊಳಿಸಿದ ಬಗ್ಗೆ ವರದಿಯಾಗಿದೆ.
ಇದೇ ಕಾರಣಕ್ಕೆ ನಾಗಪುರದ ಸರಕಾರಿ ವೈದ್ಯಕೀಯ ಕಾಲೇಜಿನ 300ಕ್ಕೂ ಹೆಚ್ಚು ವೈದ್ಯರನ್ನು ಕಾಲೇಜಿನ ಡೀನ್ ಅಮಾನತುಗೊಳಿಸಿದ್ದಾರೆ. ವೈದ್ಯರು ತಕ್ಷಣ ಮುಷ್ಕರ ಕೈಬಿಡದಿದ್ದರೆ ಅವರ ಆರು ತಿಂಗಳ ವೇತನ ಕಡಿತಗೊಳಿಸುವುದಾಗಿ ಹಲವಾರು ವೈದ್ಯಕೀಯ ಕಾಲೇಜುಗಳ ಡೀನ್‌ಗಳು ಎಚ್ಚರಿಕೆ ನೀಡಿದ್ದಾರೆ ಎಂದೂ ವರದಿಯಾಗಿದೆ.