ಎಡಿಎಂಕೆ ಚಿಹ್ನೆಗೆ ಚು. ಆಯೋಗ ಮುಟ್ಟುಗೋಲು
ಚಿಹ್ನೆ ಹಾಗೂ ಪಕ್ಷದ ಹೆಸರನ್ನು ಬಳಸದಂತೆ ಶಶಿಕಲಾ, ಪನ್ನೀರ್ ಬಣಗಳಿಗೆ ತಾಕೀತು

ಚೆನ್ನೈ,ಮಾ.22: ಎಡಿಎಂಕೆ ಪಕ್ಷದ ಎರಡೆಲೆ ಚುನಾವಣಾ ಚಿಹ್ನೆಯನ್ನು ಚುನಾವಣಾ ಆಯೋಗವು ಬುಧವಾರ ಸ್ತಂಭನಗೊಳಿಸಿದೆ. ಶಶಿಕಲಾ ಹಾಗೂ ಓ.ಪನ್ನೀರ್‌ಸೆಲ್ವಂ ಬಣಗಳು ಎಡಿಎಂಕೆ ಪಕ್ಷದ ಚುನಾವಣಾ ಚಿಹ್ನೆಯ ಮೇಲೆ ಹಕ್ಕೊತ್ತಾಯ ಮಂಡಿಸಿರುವ ಹಿನ್ನೆಲೆಯಲ್ಲಿ ಆಯೋಗ ಈ ನಿರ್ಧಾರವನ್ನು ಕೈಗೊಂಡಿದೆ. ಇದರಿಂದಾಗಿ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ತೆರವಾಗಿರುವ ಆರ್.ಕೆ. ನಗರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎರಡೂ ಬಣಗಳು ಬೇರೆ ಚಿಹ್ನೆಯೊಂದಿಗೆ ಸ್ಪರ್ಧಿಸಬೇಕಾಗಿದೆ. ಎರಡೂ ಬಣಗಳು ಚುನಾವಣಾ ಚಿಹ್ನೆ ಮಾತ್ರವಲ್ಲ ಪಕ್ಷದ ಹೆಸರನ್ನು ಬಳಸುವುದನ್ನು ಕೂಡಾ ಆಯೋಗ ನಿಷೇಧಿಸಿದೆ.
ಎಡಿಎಂಕೆ ಪಕ್ಷದ ಮೇಲೆ ತಮ್ಮ ಹಕ್ಕುಸ್ಥಾಪನೆಯನ್ನು ಸಮರ್ಥಿಸಲು ಪೂರಕವಾದ ದಾಖಲೆಗಳನ್ನು ಎಪ್ರಿಲ್ 17ರೊಳಗೆ ಸಲ್ಲಿಸುವಂತೆ ಆಯೋಗ ಎರಡೂ ಬಣಗಳಿಗೆ ಸೂಚನೆ ನೀಡಿದೆ.
ಎಡಿಎಂಕೆ ಚುನಾವಣಾ ಚಿಹ್ನೆಗಾಗಿ ಓ.ಪನ್ನೀರಸೆಲ್ವಂ ಹಾಗೂ ಶಶಿಕಲಾ ಬಣಗಳ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿದೆ. ಈ ಮಧ್ಯೆ ಆರ್.ಕೆ. ನಗರ್ ಉಪಚುನಾವಣೆಯಲ್ಲಿ ಶಶಿಕಲಾ ಬಣದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಟಿಟಿವಿ ದಿನಕರ್ ಈ ಬಗ್ಗೆ ಹೇಳಿಕೆ ನೀಡಿ, ‘‘ ಚುನಾವಣಾ ಚಿಹ್ನೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನಾವು ಹೋರಾಟದ ಮೂಲಕ ಚಿಹ್ನೆಯನ್ನು ಮರಳಿ ಪಡೆಯಲಿದ್ದೇವೆ. ಇದಕ್ಕಾಗಿ ನಾವು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೆಟ್ಟಲೇರಲೂ ಸಿದ್ಧರಿದ್ದೇವೆ’’ ಎಂದು ಹೇಳಿದ್ದಾರೆ.