ಮುಖ್ಯಮಂತ್ರಿ ಆದಿತ್ಯನಾಥ್‌ಗೆ ತಮ್ಮದೇ ದ್ವೇಷಭಾಷಣ ಕಡತ ವಿಲೇವಾರಿ ಯೋಗ!

ಲಕ್ನೋ, ಮಾ.23: ಗೃಹಖಾತೆಯನ್ನೂ ತಮ್ಮಲ್ಲೇ ಹೊಂದಿರುವ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಈಗ ತಮ್ಮ ವಿರುದ್ಧದ ದ್ವೇಷಭಾಷಣದ ಕಡತ ವಿಲೇವಾರಿಯಯ ಯೋಗ!
ಯೋಗಿ ಆದಿತ್ಯನಾಥ್, ಪಕ್ಷದ ಗೋರಖ್‌ಪುರ ಶಾಸಕ ರಾಧಾಮೋಹನ್‌ದಾಸ್ ಅಗರ್‌ವಾಲ್, ರಾಜ್ಯಸಭಾ ಸದಸ್ಯ ಶಿವ ಪ್ರತಾಪ್ ಶುಕ್ಲಾ ಸೇರಿದಂತೆ ಐದು ಮಂದಿಯ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ಕೋರಿ ರಾಜ್ಯ ಪೊಲೀಸ್ ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಕಡತ ಎರಡು ವರ್ಷದಿಂದ ಬಾಕಿ ಇದೆ.
ಧರ್ಮ ಹಾಗೂ ಜಾತಿ ಆಧಾರದಲ್ಲಿ ದ್ವೇಷಭಾವನೆ ಹರಡುವ ಭಾಷಣ ವಿರುದ್ಧ ಇವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಭಾರತೀಯ ದಂಡಸಂಹಿತೆಯ ಸೆಕ್ಷನ್ 153 ಎ ಅನ್ವಯ ಗೃಹ ಇಲಾಖೆಯ ಅನುಮತಿ ಅಗತ್ಯವಿದೆ.
ರಾಜ್ಯ ಸಿಐಡಿಯ ಅಪರಾಧ ವಿಭಾಗ ಈ ಸಂಬಂಧ ಅಖಿಲೇಶ್ ಯಾದವ್ ಸರಕಾರಕ್ಕೆ 2015ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. 2007ರ ಜನವರಿ 27ರಂದು ಗೋರಖ್‌ಪುರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹರಡಿದ ಕೋಮುಲಗಭೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಹಿಂದಿನ ದಿನ ರಾತ್ರಿ ವಿವಾಹ ಸಮಾರಂಭವೊಂದರಲ್ಲಿ ರಸಮಂಜರಿ ಕಾರ್ಯಕ್ರಮ ನೀಡಲು ಬಂದಿದ್ದ ಸಂಗೀತ ತಂಡದಲ್ಲಿದ್ದ ಮಹಿಳೆಯೊಬ್ಬರ ಜತೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ. ಜನ ಆತನನ್ನು ಅಟ್ಟಿಸಿಕೊಂಡು ಹೋದಾಗ, ಪಕ್ಕದಲ್ಲೇ ಸಾಗುತ್ತಿದ್ದ ಮೊಹರಂ ಮೆರವಣಿಗೆಯಲ್ಲಿ ಆತ ಸೇರಿಕೊಂಡ ಎನ್ನಲಾಗಿದೆ. ಒಂದು ಕಡೆಯವರು ಗುಂಡಿನ ದಾಳಿ ನಡೆಸಿದಾಗ ಮೊಹರಂ ಮೆರವಣಿಗೆಯಲ್ಲಿ ತೆರಳುತ್ತಿದ್ದ ಕೆಲವರು ಗಾಯಗೊಂಡಿದ್ದರು. ಬಳಿಕ ಗುಂಪುಘರ್ಷಣೆ ನಡೆದು ರಾಜ್ ಕುಮಾರ್ ಅಗ್ರಹಾರಿ ಎಂಬಾತ ಗಾಯಗೊಂಡಿದ್ದ.
ಈ ಸಂಬಂಧ ಪರ್ವೇಜ್ ಪರ್ವೇಜ್ (62) ಎಂಬ ಮಾಜಿ ಪತ್ರಕರ್ತ ಹಾಗೂ ಗೋರಖ್‌ಪುರ ಸಾಮಾಜಿಕ ಹೋರಾಟಗಾರ ಈ ಸಂಬಂಧ ನೀಡಿದ್ದ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಆದರೆ ಹೈಕೋರ್ಟ್ ಮಧ್ಯಪ್ರವೇಶದ ಬಳಿಕ 2008ರ ಸೆಪ್ಟೆಂಬರ್ 26ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಆದಿತ್ಯನಾಥ್ ಹಾಗೂ ಇತರರ ವಿರುದ್ಧ ದ್ವೇಷಭಾಷಣದ ಆರೋಪವಿದೆ.