ಪ್ರಮುಖ ಔಷಧಿಗಳು ಮುಂದಿನ ತಿಂಗಳಿಂದ ತುಟ್ಟಿ

ಹೊಸದಿಲ್ಲಿ, ಮಾ.23: ದೇಶದಲ್ಲಿ ಎಲ್ಲ ಅಗತ್ಯ ಔಷಧಿಗಳ ಬೆಲೆ ಏಪ್ರಿಲ್ ಒಂದರಿಂದ ಶೇಕಡ 2ರಷ್ಟು ಹೆಚ್ಚಲಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ನ್ಯಾಷನಲ್ ಫಾರ್ಮಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ) ವಾರ್ಷಿಕ ಬೆಲೆ ಹೆಚ್ಚಳಕ್ಕೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವಂತೆ ಎಲ್ಲ ಔಷಧ ತಯಾರಿಕಾ ಕಂಪೆನಿಗಳಿಗೆ ಸೂಚನೆ ನೀಡಿದೆ. ಸಗಟು ಬೆಲೆ ಸೂಚ್ಯಂಕ ಆಧರಿತವಾಗಿ ವಾರ್ಷಿಕ ಬೆಲೆ ಹೆಚ್ಚಳಕ್ಕೆ ಅವಕಾಶವಿದೆ.
ಡಬ್ಲ್ಯುಪಿಐಗೆ ಅನುಗುಣವಾಗಿ ವಾರ್ಷಿಕವಾಗಿ ಎನ್‌ಪಿಪಿಎ, ಔಷಧಗಳ ಬೆಲೆಯನ್ನು ಪರಿಷ್ಕರಿಸುತ್ತದೆ. "ಆರ್ಥಿಕ ಸಲಹೆಗಾರರು ದೃಢೀಕರಿಸಿರುವಂತೆ ಸಗಟು ಬೆಲೆ ಸೂಚ್ಯಂಕದ ವಾರ್ಷಿಕ ಬದಲಾವಣೆಯು ಹಿಂದಿನ ವರ್ಷದ ಅಂತ್ಯದಲ್ಲಿ ಇದ್ದ ಬೆಲೆಗಿಂತ 2016ರಲ್ಲಿ 1.97186 ಶೇಕಡ ಆಗಿದೆ" ಎಂದು ಎನ್‌ಪಿಪಿಎ ಪ್ರಕಟಣೆ ಹೇಳಿದೆ.
ದೇಶದಲ್ಲಿ ಅಗತ್ಯ ಔಷಧಗಳ ಬೆಲೆಯನ್ನು ಸರಕಾರ ನೇರವಾಗಿ ನಿಯಂತ್ರಿಸುತ್ತದೆ. ಇದರಲ್ಲಿ ಸುಮಾರು 875 ಔಷಧಿಗಳು ಸೇರಿವೆ. ಇದರಲ್ಲಿ ಮಧುಮೇಹ, ಹೈಪರ್ ಟೆನ್ಷನ್, ಹೆಪಟೈಟಿಸ್, ಕಿಡ್ನಿ ಸಮಸ್ಯೆಗಳು ಸೇರಿವೆ. ಆಂಟಿಬಯಾಟಿಕ್ಸ್, ಅನಾಲ್ಜಿಸಿಸ್, ಸ್ಟೆಂಟ್ ಹಾಗೂ ಕಾಂಡೋಮ್‌ಗಳು ಸೇರುತ್ತವೆ.