ಆಝಂ ಖಾನ್ ಫೋಟೊ ನೋಡಿ ಕೋಪದಿಂದ ಕೆಂಡಾಮಂಡಲರಾದ ಸಚಿವ ಮುಹ್ಸಿನ್ ರಝಾ

ಲಕ್ನೊ, ಮಾ. 23: ಉತ್ತರಪ್ರದೇಶದಲ್ಲಿ ಬಿಜೆಪಿಯ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟದ ಸದಸ್ಯರು ತಮ್ಮ ಕೆಲಸ ಪ್ರಾರಂಭಿಸಿದ್ದಾರೆ. ಜೊತೆಗೆ ಹಿಂದಿನ ಅಖಿಲೇಶ್ ಯಾದವ್ ಸರಕಾರದ ಸಚಿವರ ಫೋಟೊವನ್ನೂ ಕೂಡ ಆದಿತ್ಯನಾಥ್ ಸರಕಾರದ ಕೆಲವು ಸಚಿವರು ಸಹಿಸುವುದಿಲ್ಲ. ಇಂತಹ ದೊಂದು ಘಟನೆ ಇಂದು ವರದಿಯಾಗಿದೆ. ಸಂಪುಟದಲ್ಲಿ ಏಕೈಕ ಮುಸ್ಲಿಮ್ ಮುಖ ಮಾಜಿ ಕ್ರಿಕೆಟಿಗ ಮುಹ್ಸಿನ್ ರಝಾ ಅಲ್ಪಸಂಖ್ಯಾತರ ಮತ್ತು ಹಜ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅವರು ತನ್ನ ಕಚೇರಿಗೆ ಹೋದಾಗ ಅಲ್ಲಿ ಮಾಜಿ ಸಚಿವ ಆಝಂಖಾನ್‌ರ ಫೋಟೊ ನೋಡಿಸಿಡಿಮಿಡಿಗೊಂಡು ಅಧಿಕಾರಿಗಳ ವಿರುದ್ಧ ಘರ್ಜಿಸಿದ್ದಾರೆ. ಅವರು ಹಜ್ ಸಮಿತಿಯ ಕಾರ್ಯದರ್ಶಿಯನ್ನು ಕರೆದು ಕೂಡಲೇ ಆಝಂಖಾನ್‌ರ ಫೋಟೊ ತೆರವುಗೊಳಿಸಿ ಅಲ್ಲಿ ಮೋದಿ ಮತ್ತು ಮುಖ್ಯಮಂತ್ರಿ ಆದಿತ್ಯನಾಥ್ ರ ಫೋಟೊ ಇರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ. ನಂತರ ಪ್ರಧಾನಿ ಮೋದಿಯು ಅಲ್ಪಸಂಖ್ಯಾತರಿಗೆ ಸೌಲಭ್ಯ ಹೆಚ್ಚಳಗೊಳಿಸಿದ ಘೋಷಣೆಗಳನ್ನು ಅಲ್ಲಲ್ಲಿ ಬರೆದಿಡಲು ಹೇಳಿದ್ದಾರೆ. ಜೊತೆಗೆ ಜನರಿಗೆ ಸಿಗುವ ಸೌಲಭ್ಯಗಳನ್ನು ಕಾರ್ಯದರ್ಶಿಯಲ್ಲಿ ವಿಚಾರಿಸಿ ತಿಳಿದುಕೊಂಡರು. ಜೊತೆಗೆ ಕುಡಿಯುವ ನೀರು ಇತ್ಯಾದಿಗಳ ಕುರಿತು ಅಧಿಕಾರಿಗಳಿಗೆ ಸಚಿವ ಮುಹ್ಸಿನ್ ರಝಾ ಸೂಚನೆ ನೀಡಿದ್ದಾರೆ.