ನಿಮ್ಮ ದೇಹಕ್ಕೆ ಸೇಬು ಒಳ್ಳೆಯದು, ಆದರೆ ನಿಮ್ಮ ದೇಹ ಸೇಬಿನಂತೆ ಆದರೆ ...
ದಿನಕ್ಕೆ ಒಂದು ಸೇಬು ಹಣ್ಣು ಸೇವಿಸಿದರೆ ವೈದ್ಯರಿಂದ ದೂರವಿರಬಹುದು ಎಂಬುದು ಒಂದು ಜನಪ್ರಿಯ ಇಂಗ್ಲಿಷ್ ನಾಣ್ಣುಡಿ. ಈಗ ಇದೇ ಸೇಬು ಹಣ್ಣನ್ನು ಮೆಟಬೋಲಿಕ್ ಸಿಂಡ್ರೋಮ್ ನಲ್ಲಿ ‘ಆ್ಯಪಲ್ ಶೇಪ್ಡ್’ ಒಬೆಸಿಟಿ ಅಥವಾ ಸ್ಥೂಲಕಾಯತೆಯನ್ನು ವರ್ಣಿಸಲು ಉಲ್ಲೇಖಿಸಲಾಗುತ್ತದೆ. ಮೆಟಬೋಲಿಕ್ ಸಿಂಡ್ರೋಮ್ ಅಥವಾ ಸಿಂಡ್ರೋಮ್ ಎಕ್ಸ್ ಅಧಿಕ ಸಕ್ಕರೆಯಂಶ, ಅಧಿಕ ರಕ್ತದೊತ್ತಡ, ಅಸಾಮಾನ್ಯ ಲಿಪಿಡ್ಸ್ ಫ್ರ್ಯಾಕ್ಷನ್ಸ್ ಹಾಗೂ ಯಕೃತ್ ಗ್ರಂಥಿಯಲ್ಲಿ ಕೊಬ್ಬು ಶೇಖರಣೆಯಿಂದಾಗಿ ಉಂಟಾಗುತ್ತದೆ ಹಾಗೂ ಇದರ ಪರಿಣಾಮವೇ ಆ್ಯಪಲ್ ಶೇಪ್ಡ್ ಒಬೇಸಿಟಿ ಎಂದು ಹೇಳಲಾಗುತ್ತದೆ.
ಒಬ್ಬ ವ್ಯಕ್ತಿಯ ದೇಹಚರ್ಯೆಯನ್ನು ಹೆಚ್ಚಾಗಿ ಎರಡು ಹಣ್ಣುಗಳ ಆಕಾರದ ಮುಖಾಂತರ ವಿವರಿಸಲಾಗುತ್ತದೆ- ಅವುಗಳೆಂದರೆ ದೇಹವನ್ನು ಸೇಬು ಹಣ್ಣು ಮತ್ತು ಪಿಯರ್ ಅಥವಾ ಸೀಬೆಕಾಯಿಗೆ ಹೋಲಿಸಲಾಗುತ್ತದೆ. ಆದರೆ ಇವೆರಡರಲ್ಲಿ ಆಪಲ್ ಶೇಪ್ ಹೆಚ್ಚು ಕಳವಳಕಾರಿ ಏಕೆಂದರೆ ಅದು ಹೊಟ್ಟೆ ಭಾಗದ ಬೊಜ್ಜನ್ನು ಉಲ್ಲೇಖಿಸುತ್ತದೆ.
ಹೊಟ್ಟೆ ಭಾಗದಲ್ಲಿ ಬೊಜ್ಜು ಬೆಳೆದವರು ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ. ಇನ್ನೊಂದೆಡೆ ಪಿಯರ್ ಶೇಪ್ ಎಂದರೆ ತೆಳ್ಳಗಿನ ಬಳಕುವ ಸೊಂಟವಿರುವವರು ಆದರೆ ಸೊಂಟದ ಕೆಳಗಿನ ಭಾಗಗಳಲ್ಲಿ ಬೊಜ್ಜು ತುಂಬಿದವರು ಎಂದು ತಿಳಿಯಲಾಗುತ್ತದೆ.
ಆ್ಯಪಲ್ ಶೇಪ್ಡ್ ಒಬೆಸಿಟಿ ಹಾಗೂ ಪಿಯರ್ ಶೇಪ್ಡ್ ಒಬೆಸಿಟಿ ಇರುವವರು ತಮ್ಮ ದೈಹಿಕ ಚಟುವಟಿಕೆಗಳನ್ನು ಹೆಚ್ಚುಗೊಳಿಸಿ ತಮ್ಮ ದೇಹ ತೂಕವನ್ನು ನಿಯಂತ್ರಿತ ಆಹಾರ ಪದ್ಧತಿಯಿಂದ ಕಡಿಮೆಗೊಳಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಮೆಟಬೋಲಿಕ್ ಸಿಂಡ್ರೋಮ್ ಹೆಚ್ಚಾಗಿ ಏಷ್ಯನ್ನರು ಹಾಗೂ ಮುಖ್ಯವಾಗಿ ಭಾರತೀಯರಲ್ಲಿ ಸಾಮಾನ್ಯವಾಗಿದೆಯೆಂದೂ ಹೇಳಲಾಗುತ್ತಿದೆ.