ಕೇರಳ ರಾಜ್ಯ: ಭ್ರಷ್ಟಾಚಾರದಲ್ಲಿ ಸ್ಥಳೀಯ ಸ್ವಾಯತ್ತ ಆಡಳಿತ ಇಲಾಖೆಗೆ ಅಗ್ರಸ್ಥಾನ

ತಿರುವನಂತಪುರಂ, ಮಾ.23: ಕೇರಳದ ಸ್ಥಳೀಯ ಸ್ವಾಯತ್ತ ಆಡಳಿತ ಇಲಾಖೆಯು ರಾಜ್ಯದ ಸರಕಾರಿ ಇಲಾಖೆಗಳ ಪೈಕಿ ಅತ್ಯಂತ ಭ್ರಷ್ಟ ಇಲಾಖೆಯಾಗಿದೆ ಎಂದು ಕೇರಳ ಭ್ರಷ್ಟಾಚಾರ ನಿರೋಧ ಸೂಚ್ಯಾಂಕ ಸಿದ್ದಪಡಿಸಿದ ಪಟ್ಟಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ಸರಕಾರಿ ಕ್ಷೇತ್ರದಲ್ಲಿ ಇರುವ ಒಟ್ಟು ಭ್ರಷ್ಟಾಚಾರದಲ್ಲಿ ಶೇ.10.34ರಷ್ಟು ಸ್ಥಳೀಯ ಸ್ವಾಯತ್ತ ಆಡಳಿತ ಇಲಾಖೆಯಲ್ಲಿ ಕಂಡು ಬಂದಿರುವುದಾಗಿ ರಾಜ್ಯ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ದಳ(ವಿಎಸಿಬಿ) ತಿಳಿಸಿದೆ . ಕಂದಾಯ ಇಲಾಖೆ ಶೇ.9.24, ಲೋಕೋಪಯೋಗಿ ಇಲಾಖೆ ಶೇ.5.32, ಆರೋಗ್ಯ ಇಲಾಖೆ ಶೇ.4.98, ಶಿಕ್ಷಣ ಇಲಾಖೆ ಶೇ.4.72, ಪೊಲೀಸ್ ಇಲಾಖೆ ಶೇ.4.66 ಪ್ರಮಾಣದೊಂದಿಗೆ ಆ ಬಳಿಕದ ಸ್ಥಾನದಲ್ಲಿದೆ.
ಜಲ ಸಂಪನ್ಮೂಲ ಇಲಾಖೆ ಶೇ.3.65, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಶೇ.3.50, ಅಬಕಾರಿ ಶೇ.2.86, ಗಣಿ ಇಲಾಖೆ ಶೇ.2.78 ಇವು ನಂತರದ ಸ್ಥಾನದಲ್ಲಿವೆ.
ವಿಎಸಿಬಿಯ ಸಂಶೋಧನೆ ಮತ್ತು ತರಬೇತಿ ವಿಭಾಗವು ಈ ಮಾಹಿತಿ ಸೂಚ್ಯಾಂಕದ ಮಾಹಿತಿ ಸಂಗ್ರಹಿಸಿದ್ದು ಅದನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚುನಾವಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಅನಿವಾಸಿ ಕೇರಳೀಯರ ವ್ಯವಹಾರ ಇಲಾಖೆ, ಸಂಸದೀಯ ವ್ಯವಹಾರ ಇಲಾಖೆ.. ಇತ್ಯಾದಿಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಕನಿಷ್ಟವಾಗಿದೆ ಎಂದು ವಿಎಸಿಬಿ ತಿಳಿಸಿದೆ.