ಆಮದು ಗೋಧಿಗೆ ಮತ್ತೆ ಆಮದು ಸುಂಕ: ಕೇಂದ್ರ ಚಿಂತನೆ

ಹೊಸದಿಲ್ಲಿ,ಮಾ.23: ಈ ಬಾರಿ ಭರ್ಜರಿ ಫಸಲು ಬಂದಿರುವ ಕಾರಣ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಗೋಧಿ ಮೇಲಿನ ಆಮದು ಸುಂಕವನ್ನು ಮತ್ತೆ ಹೇರುವ ಕುರಿತು ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿರುವುದಾಗಿ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಗುರುವಾರ ತಿಳಿಸಿದ್ದಾರೆ.
ಸರಕಾರವು ನಿಗದಿಪಡಿಸಿದ ಕನಿಷ್ಠ ದರಕ್ಕಿಂತಲೂ ಕಡಿಮೆ ಬೆಲೆಗೆ ರೈತರು ಗೋಧಿಯನ್ನು ಮಾರಾಟಮಾಡಬೇಕಾದ ಪರಿಸ್ಥಿತಿಯಿದೆಯೆಂದು ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಕಳವಳ ವ್ಯಕ್ತಪಡಿಸಿದಾಗ ಅವರು ಈ ಮಾಹಿತಿ ನೀಡಿದರು. 2006 ಹಾಗೂ 2015ರ ನಡುವೆ ಗೋಧಿ ಆಮದಿಗೆ ಸುಂಕವನ್ನು ವಿಧಿಸಲಾಗುತ್ತಿರಲಿಲ್ಲ. 2015ರಲ್ಲಿ ಆಮದು ಗೋಧಿಯ ಮೇಲೆ ಶೇ.25ರಷ್ಟು ಅಬಕಾರಿ ಸುಂಕವನ್ನು ವಿಧಿಸಲಾಗಿತ್ತಾದರೂ, ತರುವಾಯ ಅದನ್ನು ಶೇ.10ಕ್ಕೆ ಇಳಿಸಲಾಯಿತು ಮತ್ತು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು ಎಂದು ಪಾಸ್ವಾನ್ ತಿಳಿಸಿದರು.
ಗೋಧಿ ಬೆಳೆಯುವ ಅನೇಕ ಪ್ರದೇಶಗಳಲ್ಲಿ ಕಳೆದ ವರ್ಷ ಅಲಿಕಲ್ಲು ಮಳೆಯಾದ ಹಿನ್ನೆಲೆಯಲ್ಲಿ ಗೋಧಿ ಉತ್ಪಾದನೆಯಲ್ಲಿ ಕುಸಿತವುಂಟಾಗಿ,ಅದರ ಬೆಲೆಯಲ್ಲಿ ಭಾರೀ ಏರಿಕೆಯಾಗಬಹುದೆಂಬ ಆತಂಕದಿಂದ ಅಬಕಾರಿ ಸುಂಕವನ್ನು ತೆಗೆದುಹಾಕಲಾಗಿತ್ತು. ಆದರೆ ಈ ವರ್ಷ ದೇಶದಲ್ಲಿ 96.64 ದಶಲಕ್ಷ ಟನ್ ದಾಖಲೆ ಪ್ರಮಾಣದಲ್ಲಿ ಗೋಧಿ ಉತ್ಪಾದನೆಯಾಗಿದ್ದು, ಇದರ ಜೊತೆಗೆ 60.50 ಲಕ್ಷ ಟನ್ ದಾಸ್ತಾನಿನಲ್ಲಿದೆಯೆಂದರು.
ಆದಾಗ್ಯೂ ಅಕಾಲಿಕ ಮಳೆ ಹಾಗೂ ಅಲಿಕಲ್ಲು ಸುರಿದಲ್ಲಿ ಬೆಳೆಹಾನಿಯಾಗುವ ಸಾಧ್ಯತೆಯಿರುವುದರಿಂದ, ಮುನ್ನೆಚ್ಚರಿಕೆಯಾಗಿ ಸರಕಾರವು ಅಮದು ಸುಂಕ ಹೇರುವ ಬಗ್ಗೆ ಅವಸರದ ನಿರ್ಧಾರವನ್ನು ಕೈಗೊಳ್ಳದು ಎಂದರು. ಆದಾಗ್ಯೂ ಆಮದು ಸುಂಕ ಹೇರಿಕೆಯು ಸರಕಾರದ ಪರಿಶೀಲನೆಯಲ್ಲಿಲ್ಲ, ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮಾಜವಾದಿ ಪಕ್ಷದ ನಾಯಕ ರಾಮ್‌ಗೋಪಾಲ್ ಯಾದವ್ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾ,ಅಮದು ಗೋಧಿ ಅಗ್ಗದ ದರದಲ್ಲಿ ದೊರೆಯುವ ಕಾರಣ, ಮಧ್ಯಪ್ರದೇಶ ಹಾಗೂ ಗುಜರಾತ್‌ಗಳಲ್ಲಿ ರೈತರು ತಾವು ಬೆಳೆದ ಗೋಧಿಯನ್ನ್ನು ಕ್ವಿಂಟಾಲ್‌ಗೆ 1625 ರೂ.ಗಳ ಕನಿಷ್ಠ ಬೆಂಬಲ ದರದಲ್ಲಿ ಮಾರಬೇಕಾದ ಪರಿಸ್ಥಿತಿಯಿತ್ತು ಎಂದು ಹೇಳಿದ್ದರು. ಗೋಧಿ ಬೆಳೆಯಲು ಪ್ರತಿಕ್ವಿಂಟಾಲ್‌ಗೆ 1900 ರೂ. ವೆಚ್ಚವಾಗುತ್ತಿದ್ದು, ಹಾಲಿ ಕನಿಷ್ಠ ಬೆಂಬಲ ದರದಿಂದ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 300 ರೂ. ನಷ್ಟವಾಗುತ್ತಿದೆ ಎಂದು ಹೇಳಿದ್ದರು.







