ಲಂಡನ್ ಉಗ್ರ ದಾಳಿ: ಏಳು ಬಂಧನ

ಲಂಡನ್, ಮಾ. 23: ಲಂಡನ್‌ನ ವೆಸ್ಟ್‌ಮಿನ್ಸ್‌ಟರ್‌ನಲ್ಲಿರುವ ಸಂಸತ್‌ಭವನದ ಸಮೀಪ ಬುಧವಾರ ನಡೆದ ದಾಳಿಗೆ ಸಂಬಂಧಿಸಿ ಲಂಡನ್ ಪೊಲೀಸರು ಗುರುವಾರ ಏಳು ಮಂದಿಯನ್ನು ಬಂಧಿಸಿದ್ದಾರೆ.
ಅದೇ ವೇಳೆ, ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನಾಲ್ಕರಿಂದ ಮೂರಕ್ಕೆ ಪರಿಷ್ಕರಿಸಲಾಗಿದೆ ಎಂದು ಬ್ರಿಟನ್‌ನ ಉನ್ನತ ಭಯೋತ್ಪಾದಕ ನಿಗ್ರಹ ಅಧಿಕಾರಿ ಮಾರ್ಕ್ ರೌಲೆ ಹೇಳಿದರು. ಭಯೋತ್ಪಾದಕ ದಾಳಿಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ.
‘‘ನಾವು ಆರು ಸ್ಥಳಗಳಲ್ಲಿ ಶೋಧ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರೌಲೆ ತಿಳಿಸಿದರು.
ಲಂಡನ್ ಮತ್ತು ಬರ್ಮಿಂಗ್‌ಹ್ಯಾಂ ನಗರಗಳಲ್ಲಿ ಶೋಧ ನಡೆಸಲಾಯಿತು ಎಂದು ಅವರು ತಿಳಿಸಿದರು.
ದಾಳಿಕೋರನು ಸಮೀಪದ ವೆಸ್ಟ್‌ಮಿನ್ಸ್‌ಟರ್ ಸೇತುವೆಯಲ್ಲಿ ಏಳು ಮಂದಿ ಪಾದಚಾರಿಗಳ ಮೇಲೆ ಕಾರು ಚಲಾಯಿಸಿದನು ಹಾಗೂ ಬಳಿಕ ಸಂಸತ್ತು ದ್ವಾರದಲ್ಲಿ ಪೊಲೀಸ್ ಅಧಿಕಾರಿಯೋರ್ವರನ್ನು ಬೆನ್ನಟ್ಟಿದನು. ಬಳಿಕ ಭಯೋತ್ಪಾದಕನು ದೊಡ್ಡ ಚಾಕುವೊಂದರಿಂದ ಆ ಪೊಲೀಸ್ ಅಧಿಕಾರಿಯನ್ನು ಇರಿದು ಕೊಂದನು.
ಬಳಿಕ ಶಸ್ತ್ರಧಾರಿ ಪೊಲೀಸರು ದಾಳಿಕೋರನನ್ನು ಗುಂಡು ಹಾರಿಸಿ ಕೊಂದರಾದರೂ, ಅದಕ್ಕೆ ಮುನ್ನ ಆತನು ಇಬ್ಬರು ಸಾರ್ವಜನಿಕರು ಹಾಗೂ ಓರ್ವ 48 ವರ್ಷದ ಪೊಲೀಸ್ ಅಧಿಕಾರಿಯನ್ನು ಕೊಂದಾಗಿತ್ತು.
ಲಂಡನ್‌ನ ಸಂಸತ್ ಕಟ್ಟಡದ ಬಳಿ ಬುಧವಾರ ಭಯೋತ್ಪಾದಕ ದಾಳಿ ನಡೆಸಿದ ವ್ಯಕ್ತಿ ಬ್ರಿಟನ್‌ನಲ್ಲಿ ಹುಟ್ಟಿದವನು ಹಾಗೂ ಆತನ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಗೊತ್ತಿದೆ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಗುರುವಾರ ಹೇಳಿದ್ದಾರೆ.
‘‘ಈ ವ್ಯಕ್ತಿ ಬ್ರಿಟನ್‌ನಲ್ಲಿ ಹುಟ್ಟಿದವನು ಹಾಗೂ ಕೆಲವು ವರ್ಷಗಳ ಹಿಂದೆ ಹಿಂಸಾತ್ಮಕ ತೀವ್ರವಾದಕ್ಕೆ ಸಂಬಂಧಿಸಿ ಗುಪ್ತಚರ ಸಂಸ್ಥೆ ಎಂಐ5 ಆತನನ್ನು ವಿಚಾರಣೆಗೆ ಒಳಪಡಿಸಿತ್ತು ಎಂಬುದನ್ನು ನಾನು ಖಚಿತಪಡಿಸಬಲ್ಲೆ’’ ಎಂದು ಅವರು ಸಂಸದರಿಗೆ ತಿಳಿಸಿದರು.
ಆತನ ಉದ್ದೇಶ ಮತ್ತು ಪಿತೂರಿಯ ಬಗ್ಗೆ ಮುನ್ನೆಚ್ಚರಿಕೆ ಇರಲಿಲ್ಲ ಎಂದರು.
ಬೆದರಿಕೆ ಧಿಕ್ಕರಿಸಿ ಬ್ರಿಟಿಶ್ ಸಂಸತ್ತು ಪುನಾರಂಭ
ಭಯೋತ್ಪಾದಕ ದಾಳಿ ನಡೆದ ಒಂದು ದಿನದ ಬಳಿಕ, ಭಯೋತ್ಪಾದನೆಯನ್ನು ಧಿಕ್ಕರಿಸುವುದಕ್ಕಾಗಿ ಗುರುವಾರ ಬ್ರಿಟನ್ ಸಂಸತ್ತು ಪುನಾರಂಭಗೊಂಡಿತು.
ಹೌಸ್ ಆಫ್ ಕಾಮನ್ಸ್ ಚೇಂಬರ್‌ನಲ್ಲಿ ಕಿಕ್ಕಿರಿದು ಸೇರಿದ ಸಂಸದರು ತಲೆ ಬಾಗಿಸಿ ಒಂದು ನಿಮಿಷದ ವೌನ ಆಚರಿಸಿದರು.
ಅದೇ ವೇಳೆ, ಪೊಲೀಸರು ಸಮೀಪದ ಲಂಡನ್ ಮೆಟ್ರೊಪಾಲಿಟನ್ ಪೊಲೀಸ್‌ನ ಪ್ರಧಾನ ಕಚೇರಿಯ ಹೊರಗೆ ವೌನಾಚರಣೆ ಮಾಡಿದರು.
ಹೊಣೆ ಹೊತ್ತುಕೊಂಡ ಐಸಿಸ್
ಬ್ರಿಟಿಶ್ ಸಂಸತ್ತಿನ ಹೊರಗೆ ಬುಧವಾರ ನಡೆದ ದಾಳಿಗೆ ತಾನು ಜವಾಬ್ದಾರಿ ಎಂದು ಐಸಿಸ್ ಭಯೋತ್ಪಾದಕ ಸಂಘಟನೆ ಗುರುವಾರ ಹೇಳಿದೆ.
‘‘ಬ್ರಿಟಿಶ್ ಸಂಸತ್ತಿನ ಹೊರಗೆ ನಿನ್ನೆ ದಾಳಿ ನಡೆಸಿದ್ದು ಓರ್ವ ಇಸ್ಲಾಮಿಕ್ ಸ್ಟೇಟ್‌ನ ಸೈನಿಕ. ಮಿತ್ರಕೂಟದ ನಾಗರಿಕರ ಮೇಲೆ ದಾಳಿ ನಡೆಸಬೇಕು ಎಂಬ ಕರೆಗೆ ಸ್ಪಂದಿಸಿ ಆತ ಈ ಕೃತ್ಯ ನಡೆಸಿದ್ದಾನೆ’’ ಎಂದು ಐಸಿಸ್‌ನ ಸುದ್ದಿ ಸಂಸ್ಥೆ ‘ಅಮಾಕ್’ ಹೇಳಿಕೆಯೊಂದರಲ್ಲಿ ತಿಳಿಸಿದೆ.







