ಪ್ರಜಾ ಪರಿವರ್ತನಾ ವೇದಿಕೆ ನೇತೃತ್ವದಲ್ಲಿ ಬೃಹತ್ ರ‍್ಯಾಲಿ
‘ಭಡ್ತಿ ಮೀಸಲಾತಿ’ ಸಂರಕ್ಷಣೆಗೆ ಸುಗ್ರೀವಾಜ್ಞೆ ಜಾರಿಗೆ ತನ್ನಿ

ಬೆಂಗಳೂರು, ಮಾ. 23: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಲ್ಲದೆ, ಭಡ್ತಿ ಮೀಸಲಾತಿ ಕಲ್ಪಿಸಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಆಗ್ರಹಿಸಿ ಪ್ರಜಾ ಪರಿವರ್ತನಾ ವೇದಿಕೆ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು.
ಗುರುವಾರ ಇಲ್ಲಿನ ಪುರಭವನದಲ್ಲಿ ಸ್ವಾತಂತ್ರ ಉದ್ಯಾನವನದ ವರೆಗೆ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಸಿದ ಕಾರ್ಯಕರ್ತರು, ಭಡ್ತಿ ಮೀಸಲಾತಿ ಸಂರಕ್ಷಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು.
ರ್ಯಾಲಿಯ ನೇತೃತ್ವ ವಹಿಸಿದ್ದ ಬಿ.ಗೋಪಾಲ್ ಮಾತನಾಡಿ, ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹುದ್ದೆಗಳನ್ನು ಕದಿಯುತ್ತಿದ್ದಾರೆ. ಅವರೆಲ್ಲ ಮೈಗಳ್ಳರು ಎಂಬ ಉಲ್ಲೇಖ ಸರಿಯಲ್ಲ. ಭಡ್ತಿ ಮೀಸಲಾತಿ ಸಂರಕ್ಷಣೆಗೆ ತಮಿಳುನಾಡಿನ ಜಲ್ಲಿಕಟ್ಟು ಮಾದರಿಯಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
‘ಅಹಿಂದ’ ಮುಖ್ಯಮಂತ್ರಿ ತಾನೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರಾಜ್ಯದಲ್ಲಿನ ಎಸ್ಸಿ-ಎಸ್ಟಿ ವರ್ಷದ ನೌಕರರಿಗೆ ಭಡ್ತಿ ಮೀಸಲಾತಿ ಕಲ್ಪಿಸಿರುವ ಕಾಯ್ದೆ ರದ್ದುಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಇಲ್ಲವಾದರೆ, ಸುಗ್ರೀವಾಜ್ಞೆ ಜಾರಿಗೆ ತರಬೇಕೆಂದು ಗೋಪಾಲ್ ಆಗ್ರಹಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ರಾಜ್ಯ ಸರಕಾರ 2002ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು ಪರಿಶಿಷ್ಟರಿಗೆ ಒಂದು ರೀತಿಯಲ್ಲಿ ಮರಣ ಶಾಸನವಾಗಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ವಿಶ್ಲೇಷಿಸಿದರು.
ಇತ್ತೀಚಿನ ದಿನಗಳಲ್ಲಿ ಮೀಸಲಾತಿ ವಿರುದ್ಧ ಅಸಹನೆ ಹೆಚ್ಚಾಗುತ್ತಿದ್ದು, ಭಡ್ತಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕೆ ಮೇಲ್ಜಾತಿಯ ಮನಸ್ಸುಗಳು ಹೊಸದಿಲ್ಲಿಯಲ್ಲಿ ಬೀಡುಬಿಟ್ಟಿವೆ. ರಾಜ್ಯ ಸರಕಾರ ಅದಕ್ಕೆ ಅವಕಾಶ ಕಲ್ಪಿಸದೆ ಪರಿಶಿಷ್ಟರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಕೋರಿದರು.
ರ್ಯಾಲಿಯಲ್ಲಿ ಮೈಸೂರಿನ ಬಹುಜನ್ ಗುರುಪೀಠದ ಜ್ಞಾನಪ್ರಕಾಶ್ ಸ್ವಾಮೀಜಿ, ಬಿಎಸ್‌ಎಫ್ ರಾಷ್ಟ್ರೀಯ ಕಾರ್ಯದರ್ಶಿ, ಟಿಎನ್‌ಇಬಿ ನಿವೃತ್ತ ವ್ಯವಸ್ಥಾಪಕ ಪರಶುರಾಮ್ ಮಹಾರಾಜ್, ಪ್ರಜಾ ಪರಿವರ್ತನೆ ವೇದಿಕೆಯ ಅಧ್ಯಕ್ಷ ಬಿ.ಗೋಪಾಲ್, ಉಪಾಧ್ಯಕ್ಷ ಡಾ.ಸೈಯದ್ ರೋಶನ್ ಮುಲ್ಲಾ, ಖಜಾಂಚಿ ಪ್ರೊ.ಚಂದ್ರಕಾಂತ್, ಕೆಇಬಿ ಎಸ್ಸಿ-ಎಸ್ಟಿ ವೆಲ್ಫೇರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಕೆ.ದಾಸ್‌ಪ್ರಕಾಶ್,ರಂಗಕರ್ಮಿ ಡಾ.ಎ.ಆರ್.ಗೋವಿಂದಸ್ವಾಮಿ ಸೇರಿ ಪ್ರಮುಖರು ಹಾಜರಿದ್ದರು.
‘ಮೀಸಲಾತಿ ನಮ್ಮ ಹಕ್ಕು, ಭಡ್ತಿಯಲ್ಲಿ ಮೀಸಲಾತಿ ಆ ಹಕ್ಕಿನ ಭಾಗ.ಹೀಗಾಗಿ, ಸುಪ್ರೀಂಕೋರ್ಟ್ ತೀರ್ಪು ನಾವು ಒಪ್ಪುವುದಿಲ್ಲ. ರಾಜ್ಯ ಸರಕಾರ ಹಿಂಭಡ್ತಿ ಆಗುವುದನ್ನು ತಪ್ಪಿಸಿ, ದಲಿತರಿಗೆ ರಕ್ಷಣೆ ನೀಡಬೇಕು’.
-ಕೆ.ದಾಸ್‌ಪ್ರಕಾಶ್, ಅಧ್ಯಕ್ಷ, ಕೆಇಬಿ ಎಸ್ಸಿ-ಎಸ್ಟಿ ವೆಲ್ಫೇರ್ ಅಸೋಸಿಯೇಷನ್ ಸಂಘ
ಶೋಷಣೆ ನಿಲ್ಲುವವರೆಗೂ ಮೀಸಲಾತಿ ಇರಬೇಕೆಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು, ಸಾಮಾಜಿಕ ನ್ಯಾಯದ ಬದ್ಧತೆ ಇರುವ ಸರಕಾರ, ಪ್ರಜೆಗಳ ಹಿತ ಕಾಪಾಡಬೇಕು. ದಲಿತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’
-ಜ್ಞಾನಪ್ರಕಾಶ್ ಸ್ವಾಮೀಜಿ, ಬಹುಜನ್ ಗುರುಪೀಠ, ಮೈಸೂರು
‘ರಾಜ್ಯಸರಕಾರವು ಭಡ್ತಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮರು ಪರಿಶೀಲನೆಗಾಗಿ ಸಮರ್ಥ ಕಾನೂನು ತಜ್ಞರಿಂದ ಶೀಘ್ರವೇ ಅರ್ಜಿ ಸಲ್ಲಿಸಿ ಸಂವಿಧಾನಬದ್ಧವಾಗಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆೆ ಹೋರಾಟ ತೀವ್ರಗೊಳಿಸಲಾಗುವುದು’
-ಬಿ.ಗೋಪಾಲ್, ರಾಜ್ಯಾಧ್ಯಕ್ಷ, ಪ್ರಜಾ ಪರಿವರ್ತನ ವೇದಿಕೆ











