ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ:ಪ್ರಾಧಿಕಾರಕ್ಕೆ ಮುತ್ತಿಗೆ

ಮಂಗಳೂರು, ಮಾ.23:ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಧ ರಸ್ತೆಯನ್ನಾಗಿ ಮಾಡುವ ಸಲುವಾಗಿ 2009ರಿಂದಲೇ ಕಾಮಗಾರಿ ಆರಂಭಗೊಂಡಿದ್ದು, ಎಂಟು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಪಂಪ್‌ವೆಲ್ ಬಳಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮುತ್ತಿಗೆ ಹಾಕಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್,ಪಂಪ್‌ವೆಲ್ ಸರ್ಕಲ್ ಬಳಿ ಮೇಲುಸೇತುವೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ.ಅಲ್ಲದೆ ಇಲ್ಲಿ ಸಮರ್ಪಕವಾದ ಸರ್ವಿಸ್ ರಸ್ತೆಗಳು, ಮಳೆ ನೀರು ಹೋಗಲು ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಕಷ್ಟಪಡುತ್ತಿದ್ದಾರೆ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ದ.ಕ.ಜಿಲ್ಲೆಗೆ ಬೆಂಕಿ ಹಾಕುವ ಯೋಚನೆ ಬಿಟ್ಟು ಅಭಿವೃದ್ಧಿ ಕಾಮಗಾರಿ ಮಾಡುವ ಬಗ್ಗೆ ಚಿಂತಿಸಲಿ ಎಂದರು.
ಪ್ರತಿಭಟನೆಯ ಬಳಿಕ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಯಿತು. ಹಲವು ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಆ ಭಾಗದ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್ ಝಡ್ ಸ್ಯಾಮ್‌ಸನ್ ವಿಜಯ್‌ಕುಮಾರ್,ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವ ಬಗ್ಗೆ ನಾವು ಉತ್ಸುಹಕರಾಗಿದ್ದೆವು. ಆದರೆ ಗುತ್ತಿಗೆದಾರರ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಜೂನ್‌ನ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಕಾಮಗಾರಿ ಆರಂಭವಾಗುವಾಗ 671 ಕೋಟಿ ಇದ್ದ ಬಜೆಟ್ ಇದೀಗ 1000 ಕೋಟಿ ರೂ.ವರೆಗೆ ತಲುಪಿದೆ.ಇಂತಹ ತಾಂತ್ರಿಕ ಸಮಸ್ಯೆಗಳು ನಮ್ಮ ಮುಂದಿವೆ. ಇದನ್ನು ಶೀಘ್ರವೇ ಪರಿಹರಿಸಲು ಪ್ರಯತ್ನಿಸಲಾಗುವುದು. ಮಾ.30ರೊಳಗಾಗಿ ಜಿಲ್ಲಾಧಿಕಾರಿ, ಶಾಸಕರು, ಸ್ಥಳೀಯ ಕಾರ್ಪೊರೇಟರ್, ಪಾಲಿಕೆ ಆಯುಕತಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ವೀಸ್ ರಸ್ತೆಗಾಗಿ 48ಕಿ.ಮೀ. ರಸ್ತೆಯನ್ನು ಗುರುತಿಸಲಾಗಿದ್ದು. ಅದರಲ್ಲಿ 28 ಕಿ.ಮೀ. ರಸ್ತೆ ಆಗಿದೆ. ಇನ್ನೂ 20 ಕಿ.ಮೀ. ರಸ್ತೆಗಾಗಿ ಭೂಮಿ ಒತ್ತುವರಿಯಾಗಬೇಕಾಗಿದೆ. ಪಂಪ್‌ವೆಲ್‌ನಿಂದ ಗೋರಿಗುಡ್ಡೆವರೆಗೆ ಚರಂಡಿ ವ್ಯವಸ್ಥೆಯನ್ನು ಮಳೆಗಾಲ ಆರಂಭವಾಗುವ ಮುನ್ನನಿರ್ಮಿಸಲಾಗುವುದು. ಉಜ್ಜೋಡಿ ಮಹಾಕಾಳಿ ದೇವಸ್ಥಾನದ ಬಳಿಯ ಅಂಡರ್‌ಪಾಸ್ ವ್ಯವಸ್ಥೆಯ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ, ಎಸಿಸಿಐ ನ ಪಿ.ವಿ.ಮೋಹನ್, ಕಾಪೊರೇಟರ್‌ಗಳಾದ ಆಶಾ ಡಿ ಸಿಲ್ವಾ, ಪ್ರವೀಣ್ ಆಳ್ವ, ಜೆಸಿಂತಾ ಅಲ್ಫ್ರೆಡ್, ಅಪ್ಪಿ, ಸಬಿತಾ ಮಿಸ್ಕಿತ್, ಕೇಶವ ಮರೋಳಿ, ಶೈಲಜಾ ಟಿ.ಕೆ., ಕವಿತಾ ವಾಸು, ರತಿಕಲಾ, ಸೇವಾದಳದ ಅಶ್ರ್ಮುಖಂಡರಾದ ಸರಳಾ ಕರ್ಕೇರ, ಭರತೇಶ್ ಅಮೀನ್, ಹಬೀಬ್ ಕಣ್ಣೂರು, ನಮೀತಾ ಡಿ ರಾವ್, ಆಶೀತ್ ಪಿರೇರಾ, ಅಬೂಬಕರ್ ಬಜಾಲ್, ದಿನೇಶ್ ರಾವ್, ಪ್ರಭಾಕರ್ ಶ್ರೆಯಾನ್, ಐ.ಮೋನು ಕಣ್ಣೂರು, ಮೇರಿಲ್ ರೇಗೋ, ದುರ್ಗಾಪ್ರಸಾದ್, ಸದಾಶಿವ ಅಮೀನ್, ಹಸನ್ ಬೋಳೂರು, ಶಶಿಕಲಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.







