ಬಂಟ್ವಾಳ: ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ; ಮೂವರ ಬಂಧನ

ಬಂಟ್ವಾಳ, ಮಾ. 23: ತಾಲೂಕಿನ ಸಂಗಬೆಟ್ಟು ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 30 ಲೋಡ್ ಮರಳು ಸಹಿತ ಅಂದಾಜು 80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಗಬೆಟ್ಟು ಬಳಿಯ ಓಡದ ಕರಿಯ ಎಂಬಲ್ಲಿ ಫಾಲ್ಗುಣಿ ನದಿಯಲ್ಲಿ ಅಕ್ರಮವಾಗಿ ದೋಣಿಗೆ ಯಂತ್ರವನ್ನು ಸಿಕ್ಕಿಸಿ ಅದರ ಸಹಾಯದಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಒಂದು ಇಟಾಚಿ, ಎರಡು ಲಾರಿ, ಸುಮಾರು 30 ಲೋಡಿನಷ್ಟು ಮರಳು, ಒಂದು ಡಿಗ್ಗಿಂಗ್ ಯಂತ್ರ ಅಳವಡಿಸಿದ ದೋಣಿ ಮತ್ತು ಇತರೆ ಪರಿಕರಗಳು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ .ಜಿ. ಬೊರಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಬಂಟ್ವಾಳ ನಗರ ಠಾಣಾ ಎಸ್ಸೈ ನಂದಕುಮಾರ್ ಮತ್ತು ಸಿಬ್ಬಂದಿಯಾದ ಸೀತಾರಾಮ್, ಕೃಷ್ಣ, ಗೋಣಿ ಬಸಪ್ಪ, ಚಾಲಕ ಸತ್ಯ ಪ್ರಕಾಶ್ ಹಾಗೂ ಇತರರು ಭಾಗವಹಿಸಿದ್ದರು.





