ನಜೀಬ್ ಗೆ ಐಸಿಸ್ ನಂಟು ಕಲ್ಪಿಸಿದ ಸುದ್ದಿ ಮುಖಪುಟದಲ್ಲಿ, ಹಾಗೆ ಇಲ್ಲ ಎಂಬ ಸುದ್ದಿ ಒಳಪುಟದಲ್ಲಿ
ನಾಪತ್ತೆಯಾದ ಪತ್ರಿಕಾ ಧರ್ಮ !

ಹೊಸದಿಲ್ಲಿ, ಮಾ. 23 : ಅಕ್ಟೊಬರ್ 15,2016 ರಂದು ಎಬಿವಿಪಿ ಸದಸ್ಯರೊಂದಿಗೆ ಜಗಳದ ಬಳಿಕ ಜೆ ಎನ್ ಯು ನಿಂದ ನಾಪತ್ತೆಯಾಗಿರುವ ನಜೀಬ್ ಅಹ್ಮದ್ ಈವರೆಗೆ ಪತ್ತೆಯಾಗಿಲ್ಲ. ಆತನನ್ನು ಹುಡುಕಿಕೊಡಿ ಎಂದು ಆತನ ತಾಯಿ ಬೇಡದ ಗದ್ದುಗೆಗಳಿಲ್ಲ . ಆದರೆ ಐದು ತಿಂಗಳ ಬಳಿಕವೂ ನಜೀಬ್ ಎಲ್ಲಿದ್ದಾನೆ ಎಂದು ತಿಳಿದು ಬಂದಿಲ್ಲ . ಇಷ್ಟು ಸಾಕಾಗದು ಎಂದು ಆ ತಾಯಿಗೆ ಮರ್ಮಾಘಾತ ನೀಡುವ ಕೆಲಸ ಮಾಧ್ಯಮಗಳಿಂದ ನಡೆದಿದೆ.
21 ಮಾರ್ಚ್ 2017 ರಂದು ಟೈಮ್ಸ್ ಆಫ್ ಇಂಡಿಯಾ ತನ್ನ ಮುಖಪುಟದಲ್ಲಿ ನಜೀಬ್ ಐಸಿಸ್ ಕುರಿತು ಅನುಕಂಪ ಇದ್ದವನು ಎಂದು ವರದಿ ಪ್ರಕಟಿಸಿತು. ರಾಜಶೇಖರ್ ಝಾ ಎಂಬವರು ಬರೆದ ಈ ವರದಿಯಲ್ಲಿ " ನಾಪತ್ತೆಯಾಗುವ ಹಿಂದಿನ ತಿಂಗಳುಗಳಲ್ಲಿ ನಜೀಬ್ ಐಸಿಸ್ ಸಿದ್ಧಾಂತ , ಅವರು ಮಾಡುವ ಕೊಲೆಗಳು ಹಾಗು ಅವರ ಜಾಲದ ಕುರಿತು ಇಂಟರ್ನೆಟ್ ನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದ ಎಂದು ಪೊಲೀಸರಿಗೆ ಬಂದಿರುವ ವರದಿ ಹೇಳಿದೆ " ಎಂದು ಹೇಳಲಾಗಿತ್ತು.
" ಈ ಅವಧಿಯಲ್ಲಿ ಆತ ತನ್ನ ಲ್ಯಾಪ್ ಟಾಪ್ ನಲ್ಲಿ ವೀಕ್ಷಿಸಿದ ಹೆಚ್ಚಿನ ವೀಡಿಯೊಗಳು ಐಸಿಸ್ ಗೆ ಸಂಬಂಧಿಸಿದವುಗಳು. ಈ ವಿವರವನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿದೆ. " ಎಂದೂ ಆ ವರದಿಯಲ್ಲಿತ್ತು. ಮುಖಪುಟದಲ್ಲಿ 70 ಪದಗಳ ಸಂಕ್ಷಿಪ್ತ ವರದಿಯಿದ್ದರೆ , ಮೂರನೇ ಪುಟದಲ್ಲಿ 500 ಪದಗಳ ವಿವರವಾದ ವರದಿಯಲ್ಲಿ ನಜೀಬ್ ಹೇಗೆ ಐಸಿಸ್ ಕಡೆ ಆಕರ್ಷಿತನಾಗಿದ್ದ ಎಂದು ಹೇಳಲಾಗಿತ್ತು.
ಇಷ್ಟು ಬಂದಿದ್ದೇ , ಹಲವಾರು ಟಿವಿ ಚಾನಲ್ ಗಳು ಇದೇ ಸುದ್ದಿಯನ್ನು ಎತ್ತಿಕೊಂಡು " ನಜೀಬ್ ಐಸಿಸ್ ನಂಟು " ಕುರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದವು. ಟೈಮ್ಸ್ ನೌ ನಲ್ಲಿ ಬಂದ ವರದಿಯ ತುಣುಕು ಇಲ್ಲಿದೆ :
ಝೀ ನ್ಯೂಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಜೀಬ್ ಐಸಿಸ್ ಸೇರಲು ಬಯಸಿದ್ದ ಎಂದೇ ಹೇಳಿತು.
ಆದರೆ ಕೊನೆಗೂ ಸತ್ಯ ಹೊರಗೆ ಬಂತು. ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿ ಸಂಪೂರ್ಣ ಸುಳ್ಳು , ಅಂತಹ ಯಾವುದೇ ವರದಿ ಪೊಲೀಸರಿಗೆ ಬಂದಿಲ್ಲ ಎಂಬ ವಾಸ್ತವ ಬಹಿರಂಗವಾಯಿತು.
ನಜೀಬ್ ಗೆ ಐಸಿಸ್ ಜೊತೆ ಸಂಬಂಧ ಕಲ್ಪಿಸುವ ಯಾವುದೇ ವರದಿ, ಸಾಕ್ಷ್ಯ ಸಿಕ್ಕಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ ಪತ್ರಿಕಾ ಗೋಷ್ಠಿಯ ವೀಡಿಯೊ ಇಲ್ಲಿದೆ :
ಆದರೆ ಸತ್ಯ ಬಹಿರಂಗವಾಗುವ ಮೊದಲೇ , ಬಲಪಂಥೀಯ ನಿಲುವಿನ ಹೆಚ್ಚಿನವರು ತಮ್ಮ ಫೇಸ್ ಬುಕ್, ಟ್ವಿಟ್ಟರ್ ಹಾಗು ವೆಬ್ ಸೈಟ್ ಮತ್ತಿತರ ಕಡೆ ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ಉಲ್ಲೇಖಿಸಿ ತಮಗೆ ಬೇಕಾದಂತೆ ವ್ಯಾಖ್ಯಾನ ನೀಡುತ್ತಿದ್ದರು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥರು ಇದೇ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ್ದು ಇಲ್ಲಿದೆ :
ಇಷ್ಟು ಆದ ಮೇಲೆ, ಮಾರ್ಚ್ 22 ರಂದು ಟೈಮ್ಸ್ ಆಫ್ ಇಂಡಿಯಾ ತನ್ನ 5 ನೇ ಪುಟದಲ್ಲಿ ನಜೀಬ್ ಗೆ ಐಸಿಸ್ ನಂಟು ಇರುವ ಯಾವುದೇ ವರದಿ ಸಿಕ್ಕಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ ಎಂದು 75 ಪದಗಳ ವರದಿಯೊಂದನ್ನು ಪ್ರಕಟಿಸಿ ಕೈತೊಳೆದುಕೊಂಡಿತು. ಆದರೆ ಆತನಿಗೆ ಐಸಿಸ್ ನಂಟು ಇದೆ ಎಂಬ ಸುದ್ದಿ ಮುಖಪುಟ ಹಾಗು ಮೂರನೇ ಪುಟದಲ್ಲಿ ಒಟ್ಟು 570 ಪದಗಳಲ್ಲಿ ಪ್ರಕಟವಾಗಿತ್ತು.
ಟೈಮ್ಸ್ ಆಫ್ ಇಂಡಿಯಾದ ವರದಿಗಾರ ರಾಜಶೇಖರ್ ಝಾ ತನ್ನನ್ನು ಸಮರ್ಥಿಸಿಕೊಳ್ಳಲು ಹಲವು ಟ್ವೀಟ್ ಮಾಡಿದರಾದರೂ ಕೊನೆಗೆ ಅವುಗಳಲ್ಲಿ ಹಲವನ್ನು ಡಿಲೀಟ್ ಮಾಡಿದರು.
ಅವರು ಡಿಲೀಟ್ ಮಾಡಿದ ಕೆಲವು ಟ್ವೀಟ್ ಗಳು ಇಲ್ಲಿವೆ :
*****
******
****
****
ತನ್ನ ವಿರುದ್ಧ ಮಾಡಲಾದ ಆಧಾರರಹಿತ ಆರೋಪಗಳನ್ನು ನಿರಾಕರಿಸಲು ಇಲ್ಲಿ ಇಲ್ಲದಿರುವ ಯುವ ವಿದ್ಯಾರ್ಥಿಯೊಬ್ಬ ಮಾಧ್ಯಮಗಳ ಘೋರ ಅನ್ಯಾಯಕ್ಕೆ ಬಲಿಯಾಗಬೇಕಾಯಿತು.
ಈ ಹಿಂದೆ, ಫೆಬ್ರವರಿ 16, 2016 ರಂದು ನ್ಯೂಸ್ ಎಕ್ಸ್ ಟಿವಿ ವಾಹಿನಿ ಜೆ ಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಕುರಿತು ಸಹಾನುಭೂತಿ ಇರುವವನು ಬೇಹು ಇಲಾಖೆ ಹೇಳಿದೆ ಎಂದು ವರದಿ ಪ್ರಕಟಿಸಿತು. ಅದರ ಮರುದಿನ ಅಂತಹ ಯಾವುದೇ ಬೇಹು ವರದಿ ಬಂದಿಲ್ಲ ಎಂದು ಸರ್ಕಾರ ಹೇಳಿದ ವರದಿ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಯಿತು.