ಲಕ್ಷಾಂತರ ರೂ. ಮೌಲ್ಯದ ಮದ್ಯ ಸಹಿತ ಕಾರು ವಶ
ಕಾರವಾರ ಅಬಕಾರಿ ದಾಳಿ

ಕಾರವಾರ, ಮಾ.23: ಅಕ್ರಮ ಮದ್ಯ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಲಕ್ಷಾಂತರ ರೂ. ವೌಲ್ಯದ ಅಕ್ರಮ ಮದ್ಯ ಸಹಿತ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಗುರುವಾರ ತಾಲೂಕಿನ ಮಾಜಾಳಿ ಎಂಬಲ್ಲಿ ನಡೆದಿದೆ.
ಮಾಜಾಳಿಯ ಗಿರಿಜಾಬಾಯಿ ಸೈಲ್ ಕಾಲೇಜಿಗೆ ಸಾಗುವ ರಸ್ತೆಯ ತಿರುವಿನ ಅರಣ್ಯ ಪ್ರದೇಶದಲ್ಲಿ ಮದ್ಯವನ್ನು ಕಾರಿಗೆ ತುಂಬಿಸಲಾಗುತ್ತಿದೆ ಎಂದು ಖಚಿತ ಮಾಹಿತಿ ಪಡೆದ ಅಬಕಾರಿ ಉಪ ಆಯುಕ್ತ ಶಾಮಾ ಜೋಯಿಸ್ ಮತ್ತು ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ ನೇತೃತ್ವದ ತಂಡವು ದಾಳಿ ನಡೆಸಿ ಸುಮಾರು 1,16,640 ರೂ. ವೌಲ್ಯದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯ ವೇಳೆ ಎಚ್ಚೆತ್ತುಕೊಂಡ ಆರೋಪಿಗಳು ಪರಾರಿಯಾಗಿದ್ದು, ಕಾಡಿನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ ಗೋವಾ ನೋಂದಣಿಯ ಸುಮಾರು 7ಲಕ್ಷ ರೂ. ವೌಲ್ಯದ ಪೋರ್ಡ್ ಕಾರು ಹಾಗೂ ಸುಮಾರು 2000 ರೂ. ವೌಲ್ಯದ ಮೊಬೈಲ್‌ನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಬಕಾರಿ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಕಾರವಾರ ಉಪವಿಭಾಗದ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.





