ಆಲಿಯಾ ಶಿಕ್ಷಣ ಸಂಸ್ಥೆಯಿಂದ ಅಲ್ ಬೆರೂನಿ ಇಂಡೋ ಅರಬ್ ಸಾಂಸ್ಕೃತಿಕ ವಿನಿಮಯ ಯೋಜನೆ

ಮಂಗಳೂರು, ಮಾ.23: 75ನೆ ವರ್ಷದ ಸಂಭ್ರಮದಲ್ಲಿರುವ ಕಾಸರಗೋಡಿನ ಆಲಿಯಾ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ವಿಶೇಷ ಕಾರ್ಯಕ್ರಮವೊಂದು ಇತ್ತೀಚೆಗೆ ದುಬೈಯಲ್ಲಿ ನಡೆಯಿತು. ಶಾರ್ಜಾದ ಅಲ್ ಖಾಸಿಮಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಶೀದ್ ಸಾಲಿಹ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಆಲಿಯಾ ಹಾಗೂ ಶಾರ್ಜಾ ವಿವಿ ನಡುವೆ ಪರಸ್ಪರ ಸಹಕಾರ ಹಾಗೂ ವಿನಿಮಯ ಕಾರ್ಯಕ್ರಮಗಳಿಗಾಗಿ ಒಡಂಬಡಿಕೆಗೆ ಡಾ.ರಶೀದ್ ಹಾಗೂ ಡಾ. ಹಬೀಬ್ ಸಹಿ ಹಾಕಿದರು. ಇದೇ ಸಂದರ್ಭ ಆಲಿಯಾ ಅಲ್ ಬೆರೂನಿ ಇಂಡೋ ಅರಬ್ ಸಾಂಸ್ಕೃತಿಕ ವಿನಿಮಯ ಯೋಜನೆ ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಯಿತು. 800 ವರ್ಷಗಳ ಹಿಂದೆ ಅಲ್ ಬೆರೂನಿ ಎಂಬ ಅರಬ್‌ವಿದ್ವಾಂಸ ಹಾಗೂ ಸಂಶೋಧಕ ಭಾರತದಲ್ಲಿ ಹದಿಮೂರು ವರ್ಷ ನೆಲೆಸಿ ಆಳವಾದ ಅಧ್ಯಯನ ನಡೆಸಿ ಭಾರತದ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಕುರಿತು ಅರೆಬಿಕ್ ಭಾಷೆಯಲ್ಲಿ ವಸ್ತುನಿಷ್ಠವಾಗಿ, ವೈಜ್ಞಾನಿಕವಾದ ಕೃತಿ ರಚಿಸಿದ್ದರು. ಆಲಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರೇಬಿಕ್ ಭಾಷೆಯ ಮಹತ್ವ ಹಾಗೂ ಕಳೆದ 75 ವರ್ಷಗಳಲ್ಲಿ ಆಲಿಯಾ ಈ ರಂಗದಲ್ಲಿ ಅನನ್ಯ ಸೇವೆ ಸಲ್ಲಿಸಿದೆ ಎಂದು ಹೇಳಿದರು.





