ಧರ್ಮಶಾಲಾದಲ್ಲಿ ಲಘು ಅಭ್ಯಾಸ ನಡೆಸಿದ ಕೊಹ್ಲಿ
ನಾಲ್ಕನೆ ಟೆಸ್ಟ್‌ಗೆ ಶಮಿ ಆಡುವುದು ಸಂಶಯ

ಧರ್ಮಶಾಲಾ, ಮಾ.23: ರಾಂಚಿ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಭುಜನೋವಿಗೆ ಒಳಗಾಗಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಗುರುವಾರ ಇಲ್ಲಿ ನೆಟ್ ಪ್ರಾಕ್ಟೀಸ್‌ನಲ್ಲಿ ಪಾಲ್ಗೊಂಡರು. ಈ ಮೂಲಕ ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಿದರು.
ವೇಗದ ಬೌಲರ್ ಮುಹಮ್ಮದ್ ಶಮಿ 4ನೆ ಟೆಸ್ಟ್ ಪಂದ್ಯದಲ್ಲಿ ಅಂತಿಮ 11ರ ಬಳಗದಲ್ಲಿ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಫಿಸಿಯೋ ಪ್ಯಾಟ್ರಿಕ್ ಫರ್ಹರ್ಟ್ ಅವರು ಶಮಿ ಅವರ ಫಿಟ್‌ನೆಸ್‌ನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಿಮ ಟೆಸ್ಟ್‌ನ 15ರ ಬಳಗದಲ್ಲಿ ಅವರನ್ನು ಹೆಸರಿಸಲಾಗಿಲ್ಲ. ಪುನಶ್ಚೇತನ ಯೋಜನೆಯ ಭಾಗವಾಗಿ ಅವರನ್ನು ವಿಜಯ್ ಹಝಾರೆ ಟ್ರೋಫಿ ಫೈನಲ್‌ನಲ್ಲಿ ಆಡಲು ಕಳುಹಿಸಿಕೊಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ರಾಂಚಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನ ವೇಳೆ ಫೀಲ್ಡಿಂಗ್ ಮಾಡುವಾಗ ಎಡಭುಜದ ಗಾಯಕ್ಕೆ ಗಾಯಮಾಡಿಕೊಂಡಿದ್ದ ಕೊಹ್ಲಿ 3ನೆ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರೂ ಹೆಚ್ಚು ರನ್ ಗಳಿಸಲು ವಿಫಲರಾಗಿದ್ದರು.
ಕೊಹ್ಲಿ ಗುರುವಾರ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಬಲಭುಜಕ್ಕೆ ಬ್ಯಾಂಡೇಜ್ ಹಾಕಿಕೊಂಡಿದ್ದ ಕೊಹ್ಲಿ ಫೀಲ್ಡಿಂಗ್ ಅಭ್ಯಾಸದ ವೇಳೆ ಚೆಂಡನ್ನು ಎಸೆದರು. ಭಾರತ ಶುಕ್ರವಾರವೂ ಅಭ್ಯಾಸ ಮುಂದುವರಿಸಲಿದ್ದು, ಕೊಹ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.







